ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ..!

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿರುವ ಕಾಂಗ್ರೆಸ್‌ ಸರ್ಕಾರದ ನಾಯಕತ್ವ ಬದಲಾವಣೆಯ ಬೆಳವಣಿಗೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ರಾಜ್ಯದ ಹೊರಗಿರುವ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಇಂದು ರಾತ್ರಿ ಮರಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರೊಂದಿಗೆ ರಾಜಭವನಕ್ಕೆ ತೆರಳಿದ ಸಿದ್ದರಾಮಯ್ಯ, ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರಭು ಶಂಕರ ಅವರಿಗೆ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದರು.

ರಾಜಭವನದಲ್ಲಿ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್ ಹೈಕಮಾಂಡ್ ಸೂಚನೆಯ ಮೇರೆಗೆ ಈ ನಿರ್ಧಾರ ಕೈಗೊಂಡಿರುವುದಾಗಿ ಸ್ಪಷ್ಟಪಡಿಸಿದರು.

ನನ್ನ ರಾಜೀನಾಮೆಯನ್ನು ರಾಜ್ಯಪಾಲರ ಕಚೇರಿಗೆ ಸಲ್ಲಿಸಿದ್ದೇನೆ. ರಾಜ್ಯಪಾಲರು ಸದ್ಯ ಇಲ್ಲಿಲ್ಲ, ಅವರು ಇಂದು ರಾತ್ರಿ ಹಿಂತಿರುಗಲಿದ್ದಾರೆ. ಆದ್ದರಿಂದ ಅವರ ಕಚೇರಿಗೆ ರಾಜೀನಾಮೆ ಪತ್ರ ನೀಡಲಾಗಿದೆ. ಹೈಕಮಾಂಡ್ ಸೂಚನೆ ನೀಡಿದ ತಕ್ಷಣವೇ ನಾನು ಕೆಳಗಿಳಿಯುವುದಾಗಿ ಮೊದಲೇ ಹೇಳಿದ್ದೆ. ಅದರಂತೆ ಇಂದು ರಾಜೀನಾಮೆ ನೀಡಿದ್ದೇನೆ. ನಮ್ಮ ಪಕ್ಷವು ಪೂರ್ಣ ಬಹುಮತವನ್ನು ಹೊಂದಿರುವುದರಿಂದ, ರಾಜ್ಯಪಾಲರು ಸಂವಿಧಾನಬದ್ಧವಾಗಿ ನನ್ನ ರಾಜೀನಾಮೆಯನ್ನು ಅಂಗೀಕರಿಸಿ, ಹೊಸ ಸರ್ಕಾರ ರಚನೆಗೆ ಅವಕಾಶ ನೀಡಲಿದ್ದಾರೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ ಎಂದು ಅವರು ಹೇಳಿದರು.

ಮೂಲಗಳ ಪ್ರಕಾರ ರಾಜ್ಯಪಾಲರು ಇಂದು ರಾತ್ರಿ 7:30ಕ್ಕೆ ಬೆಂಗಳೂರಿಗೆ ಮರಳುವ ಸಾಧ್ಯತೆಯಿದೆ. ಹೀಗಾಗಿ ರಾಜ್ಯಪಾಲರು ಮರಳಿದ ಬಳಿಕವಷ್ಟೇ ರಾಜೀನಾಮೆ ಅಂಗೀಕಾರದ ಔಪಚಾರಿಕ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ. ರಾಜೀನಾಮೆ ಪತ್ರವನ್ನು ಕಾರ್ಯದರ್ಶಿಗಳು ಸ್ವೀಕರಿಸಿದ್ದರೂ, ಸಂವಿಧಾನದ ನಿಯಮಾವಳಿಗಳ ಪ್ರಕಾರ ರಾಜ್ಯಪಾಲರು ಖುದ್ದಾಗಿ ಸಹಿ ಮಾಡಿದ ಬಳಿಕವೇ ರಾಜೀನಾಮೆ ಅಧಿಕೃತವಾಗಿ ಅಂಗೀಕಾರವಾಗಲಿದೆ.