ಕೆಂದಲಗೇರಿಯಲ್ಲಿ ಮಾರ್ಗಮಧ್ಯೆ 108 ಅಂಬ್ಯುಲೆನ್ಸ್‌ನಲ್ಲಿ ಗರ್ಭಿಣಿಗೆ ಯಶಸ್ವಿ ಹೆರಿಗೆ, ಸಿಬ್ಬಂದಿ ಸಮಯಪ್ರಜ್ಞೆಗೆ ಶ್ಲಾಘನೆ..!

​ಮುಂಡಗೋಡ: ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬರಿಗೆ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ 108 ಅಂಬ್ಯುಲೆನ್ಸ್‌ನಲ್ಲೇ ಯಶಸ್ವಿಯಾಗಿ ಹೆರಿಗೆ ಮಾಡಿಸುವ ಮೂಲಕ ಸಿಬ್ಬಂದಿಗಳು ಮಾನವೀಯತೆ ಮೆರೆದ ಘಟನೆ ಭಾನುವಾರ ಮುಂಡಗೋಡ ತಾಲ್ಲೂಕಿನಲ್ಲಿ ನಡೆದಿದೆ.

​ತಾಲ್ಲೂಕಿನ ಕೆಂದಲಗೇರಿ ಗ್ರಾಮದ ನಿವಾಸಿ ಶ್ರೀಮತಿ ನಿಖಿತಾ ಕಲ್ಮೇಶ ದಳವಿ (20) ಅವರಿಗೆ ಇಂದು ಭಾನುವಾರ ನಸುಕಿನ ಜಾವ ಸುಮಾರು 4:24ರ ಸುಮಾರಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಗ್ರಾಮದ ಆಶಾ ಕಾರ್ಯಕರ್ತೆ ಸುಜಾತಾ ಅವರು 108 ತುರ್ತು ಆರೋಗ್ಯ ಸೇವೆಗೆ ಕರೆ ಮಾಡಿ ಮಾಹಿತಿ ನೀಡಿದರು.

​ಮಾಹಿತಿ ಸಿಗುತ್ತಿದ್ದಂತೆಯೇ ಮುಂಡಗೋಡಿನ 108 ಅಂಬ್ಯುಲೆನ್ಸ್ ಸಿಬ್ಬಂದಿ ತಕ್ಷಣವೇ ಕೇಂದಲಗೇರಿ ಗ್ರಾಮಕ್ಕೆ ಧಾವಿಸಿ, ಗರ್ಭಿಣಿಯನ್ನು ಅಂಬ್ಯುಲೆನ್ಸ್‌ಗೆ ಹತ್ತಿಸಿಕೊಂಡು ಆಸ್ಪತ್ರೆಯತ್ತ ಪ್ರಯಾಣ ಬೆಳೆಸಿದರು. ಆದರೆ ಆಸ್ಪತ್ರೆಗೆ ತಲುಪುವ ಮಾರ್ಗಮಧ್ಯೆ ನಿಖಿತಾ ಅವರಿಗೆ ಹೆರಿಗೆ ನೋವು ಅತ್ಯಂತ ತೀವ್ರಗೊಂಡಿತು. ಪರಿಸ್ಥಿತಿಯ ಗಾಂಭೀರ್ಯತೆಯನ್ನು ಅರಿತ ಸಿಬ್ಬಂದಿ, ತಕ್ಷಣವೇ ಅಂಬ್ಯುಲೆನ್ಸನ್ನು ರಸ್ತೆಯ ಪಕ್ಕಕ್ಕೆ ನಿಲ್ಲಿಸಿದರು.

​ಅಂಬ್ಯುಲೆನ್ಸ್‌ನಲ್ಲಿದ್ದ ತುರ್ತು ವೈದ್ಯಕೀಯ ತಂತ್ರಜ್ಞ (EMT) ಧನರಾಜ್ ಸಿ. ಹಾಗೂ ಚಾಲಕ ಕೆಂಚೇಶ್ ಇ.ಎನ್. ಅವರು ಪರಿಸ್ಥಿತಿಯನ್ನು ಅತ್ಯಂತ ಜಾಣ್ಮೆಯಿಂದ ನಿಭಾಯಿಸಿ, ವಾಹನದಲ್ಲೇ ಸುರಕ್ಷಿತವಾಗಿ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾದರು. ನಿಖಿತಾ ಅವರು ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ. ಯಶಸ್ವಿ ಹೆರಿಗೆಯ ಬಳಿಕ ಇಬ್ಬರನ್ನೂ ಮುಂಡಗೋಡ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ, ಮುಂದಿನ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.

​ಇದು ನಿಖಿತಾ ಅವರಿಗೆ ಮೊದಲ ಹೆರಿಗೆಯಾಗಿದ್ದು, ಕಠಿಣ ಪರಿಸ್ಥಿತಿಯಲ್ಲೂ ಅತ್ಯಂತ ಜವಾಬ್ದಾರಿಯುತವಾಗಿ ಸ್ಪಂದಿಸಿ ತಾಯಿ ಮತ್ತು ಮಗುವಿನ ಪ್ರಾಣ ಉಳಿಸಿದ 108 ಸಿಬ್ಬಂದಿಯ ಕಾರ್ಯಕ್ಕೆ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಪತ್ಕಾಲದಲ್ಲಿ ಜೀವ ಉಳಿಸಿದ ಸಿಬ್ಬಂದಿಗೆ ಕುಟುಂಬಸ್ಥರು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.