ಮುಂಡಗೋಡಿನ ಆಲಳ್ಳಿ ಒಂಟಿ ಮಹಿಳೆಯ ಸಾವು ಸಹಜವಲ್ಲ, ಅದೊಂದು ಪ್ಲ್ಯಾನ್ಡ್ ಮರ್ಡರ್ ಅಂತೆ..! ಅಷ್ಟಕ್ಕೂ, ಒಂಟಿ ಜೀವಗಳ ರಕ್ಷಣೆಗಿರೋ ‘ಆಸರೆ’ ಯೋಜನೆ ಎಲ್ಲೋಯ್ತು ಪೊಲೀಸ್ರೆ..?

​ ಮುಂಡಗೋಡತಾಲೂಕಿನಲ್ಲಿ ಚಿನ್ನದ ಆಸೆಗೆ ಬಲಿಯಾಗ್ತಿವೆ ಒಂಟಿ ಜೀವಗಳು..! ಅಷ್ಟಕ್ಕೂ ಬೀಟ್ ಪೊಲೀಸರ ನಿರ್ಲಕ್ಷ್ಯಕ್ಕೆ ಕಡಿವಾಣ ಇಲ್ವಾ..? ಕಾಗದದಲ್ಲೇ ಉಳಿಯಿತೇ ಪೊಲೀಸ್ ಇಲಾಖೆಯ ‘ಆಸರೆ’ ಯೋಜನೆ..?

ಮುಂಡಗೋಡ ತಾಲೂಕಿನಲ್ಲಿ ಒಂಟಿ ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ ಸುರಕ್ಷತೆಯೇ ಇಲ್ವಾ..? ಒಂಟಿಯಾಗಿ ವಾಸಿಸುವ, ಏಕಾಂಗಿಯಾಗಿಯೇ ಬದುಕು ಕಟ್ಟಿಕೊಂಡಿರೋ ಹಿರಿಯ ಜೀವಗಳಿಗೆ ರಕ್ಷಣೆಯೇ ಇಲ್ವಾ..? ಇಂತಹದ್ದೊಂದು ಆತಂಕ, ಇಂತಹದ್ದೊಂದು ಪ್ರಶ್ನೆ ಇಡೀ ತಾಲೂಕಿನಲ್ಲಿ ಪ್ರಜ್ಙಾವಂತರನ್ನ ಕಾಡ್ತಿದೆ..! ಯಾಕಂದ್ರೆ, ಕಳೆದ ಒಂದೇ ಒಂದು ವರ್ಷದಲ್ಲಿ ಮುಂಡಗೋಡ ತಾಲೂಕಿನಲ್ಲಿ ಎರಡೆರಡು ಒಂಟಿ, ಹಿರಿಯ ಜೀವಗಳು ದುಷ್ಟರ ಕೈಗೆ ಸಿಕ್ಕು ಭೀಕರ ಹತ್ಯೆಯಾಗಿ ಜೀವ ಕಳೆದುಕೊಂಡಿವೆ.

ಪೊಲೀಸ್ ಇಲಾಖೆಯೆನೋ ಕೇಸುಗಳನ್ನ ಬೇಧಿಸಿ ಆರೋಪಿ ಹಂತಕರ ಹೆಡೆಮುರಿ ಕಟ್ಟುತ್ತಿದೆ. ಆದ್ರೆ, ಆ ಒಂಟಿ ಜೀವಗಳ “ಜೀವ” ಕಾಪಾಡುವತ್ತ ಯಾಕೆ ಮುಂಜಾಗ್ರತೆ ವಹಿಸ್ತಿಲ್ಲ..? ಸರ್ಕಾರ ಜಾರಿಗೆ ತಂದಿರೋ ಮಹತ್ವಾಕಾಂಕ್ಷೆಯ ಯೋಜನೆಯನ್ನೇಲ್ಲ ಯಾಕೆ ಪರಿ ಪಾಲಿಸ್ತಿಲ್ಲ..? ಅನ್ನೋದೇ ಎಲ್ಲರ ಪ್ರಶ್ನೆಯಾಗಿದೆ.

“ಆಸರೆ” ಯೋಜನೆ ಕೇವಲ ಕಾಗದಕ್ಕಷ್ಟೆನಾ..?
ಮನೆಯಲ್ಲಿ ಒಂಟಿಯಾಗಿ ವಾಸಿಸುವ ಮಹಿಳೆಯರು ಹಾಗೂ ಹಿರಿಯ ನಾಗರಿಕರಿಗೆ ರಕ್ಷಣೆ ಮತ್ತು ಭದ್ರತೆ ಒದಗಿಸುವ ಮಹತ್ವಾಕಾಂಕ್ಷೆಯೊಂದಿಗೆ ಪೊಲೀಸ್ ಇಲಾಖೆ ಜಾರಿಗೆ ತಂದಿರುವ ‘ಆಸರೆ’ ಯೋಜನೆ ಮುಂಡಗೋಡ ತಾಲೂಕಿನಲ್ಲಿ ಕೇವಲ ಕಾಗದಕ್ಕೆ ಮಾತ್ರ ಸೀಮಿತವಾಗಿದೆಯೇ ಎಂಬ ಗಂಭೀರ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ. ಒಂದೇ ವರ್ಷದಲ್ಲಿ ತಾಲೂಕಿನಲ್ಲಿ ನಡೆದಿರುವ ಇಬ್ಬರು ಒಂಟಿ ಮಹಿಳೆಯರ ಭೀಕರ ಹತ್ಯೆ ಪ್ರಕರಣಗಳು ಪೊಲೀಸ್ ಇಲಾಖೆಯ ಕಾರ್ಯವೈಖರಿ ಮತ್ತು ಬೀಟ್ ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಂತಿವೆ.

ಅದು ಭಯಾನಕ ಹತ್ಯೆ..!
ಅದು ಇದೇ ವರ್ಷದ ಫೆಬ್ರುವರಿ ತಿಂಗಳು, ಮಳಗಿಯ ಒಂಟಿ ಮಹಿಳೆಯೊಬ್ರು, ಕೊಳಗಿ ಕಾಡಲ್ಲಿ ಭೀಕರವಾಗಿ ಹತ್ಯೆಯಾಗಿದ್ರು, ರುಂಡವನ್ನು ಭೇರ್ಪಡಿಸಿದ್ದ ಹಂತಕ ಭೀಕರವಾಗಿ ಕೊಂದು ಹಾಕಿದ್ದ. ಆ ಕೇಸನ್ನ ಬೆನ್ನತ್ತಿದ್ದ ಮುಂಡಗೋಡ ಪೊಲೀಸ್ರು ಅವನೊಬ್ಬ ಕ್ರೂರಿಯನ್ನು ಹೆಡೆಮುರಿ ಕಟ್ಟಿದ್ರು. ಒಂಟಿಯಾಗಿ ಬದುಕುತ್ತಿದ್ದ ವೃದ್ದೆಯ ಬಳಿ ಇದ್ದ ಚಿನ್ನದ ಆಭರಣವೇ ಅವತ್ತು ಆಕೆಯ ಭೀಕರ ಹತ್ಯೆಗೆ ಕಾರಣವಾಗಿತ್ತು.

ಆಲಳ್ಳಿಯಲ್ಲಿ ನಡೆದದ್ದೂ ಕೊಲೆ..!
ಆ ಘಟನೆಯ ಕರಾಳ ನೆನಪು ಇನ್ನೂ ಮಾಸಿಲ್ಲ, ಆ ರಣ ರಣ ಅರಣ್ಯದಲ್ಲಿ ಬಿದ್ದಿದ್ದ ಆ ಮಹಿಳೆಯ ರಕ್ತದ ಕಲೆಗಳೂ ಇನ್ನೂ ಆರಿಲ್ಲ, ಅಷ್ಟರಲ್ಲೇ ಇದೀಗ ತಾಲೂಕಿನ ಆಲಳ್ಳಿ ಗ್ರಾಮದಲ್ಲಿ ಮತ್ತೋರ್ವ ಒಂಟಿ ಮಹಿಳೆಯ ಅನುಮಾನಾಸ್ಪದ ಸಾವು ಸಂಭವಿಸಿದೆ. ಅಂದಹಾಗೆ, ಸದ್ಯ ಮುಂಡಗೋಡ ಪೊಲೀಸ್ರ ಖಡಕ್ ತನಿಖೆಯಲ್ಲಿ ಈ ಸಾವು ಕೂಡ ವ್ಯವಸ್ಥಿತ ಹತ್ಯೆ ಅನ್ನೋ ಮಾಹಿತಿ ಬರ್ತಿದೆ. ಇಲ್ಲಿಯೂ ಕೂಡ ಬಹುತೇಕ ಚಿನ್ನಾಭರಣದ ಆಸೆಯಲ್ಲೇ ಹಂತಕನೋರ್ವ ಪ್ಲ್ಯಾನ್ಡ್ ಮಾಡಿ ಹತ್ಯೆ ಮಾಡಿದ್ದಾನೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಒಂದೇ ತಾಲೂಕಿನಲ್ಲಿ ಒಂಟಿ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ನಡೆಯುತ್ತಿರುವ ಈ ಸರಣಿ ಕೃತ್ಯಗಳು ಗ್ರಾಮೀಣ ಭಾಗದ ಜನರಲ್ಲಿ ತೀವ್ರ ಆತಂಕ ಮೂಡಿಸಿದೆ.

​‘ಆಸರೆ’ ಯೋಜನೆಯ ನಿರ್ಲಕ್ಷವಾ..?
ಅಸಲು, ಇಂತಹ ಘಟನೆಗಳು ನಡೆಯಬಾರದು ಅಂತಲೇ, ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಮಹತ್ವಾಕಾಂಕ್ಷೆಯ ಯೋಜನೆಯೊಂದನ್ನ ಜಾರಿಗೆ ತಂದಿದೆ.
ಒಂಟಿಯಾಗಿ ವಾಸಿಸುವ ಮಹಿಳೆಯರು ಮತ್ತು ವೃದ್ಧರ ಪಟ್ಟಿಯನ್ನು ಆಯಾ ಪೊಲೀಸ್ ಠಾಣೆಗಳಲ್ಲಿ ಸಿದ್ಧಪಡಿಸಿ, ಸಂಬಂಧಪಟ್ಟ ಬೀಟ್ ಪೊಲೀಸರು (Beat Police) ನಿಯಮಿತವಾಗಿ ಅವರ ಮನೆಗಳಿಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸುವುದು ‘ಆಸರೆ’ ಯೋಜನೆಯ ಮೂಲ ಉದ್ದೇಶ.

ಬೀಟ್ ಪೊಲೀಸ್ರು ಯಾಕಿರೋದು..?
​ಫೆಬ್ರವರಿಯಲ್ಲಿ ಮಳಗಿಯಲ್ಲಿ ಹತ್ಯೆ ನಡೆದಾಗಲೂ ಈ “ಆಸರೆ”ಯೋಜನೆ ಇಲಾಖೆಯಲ್ಲಿ ಜಾರಿಯಲ್ಲಿತ್ತು ತಾನೆ..? ​ಒಂದು ವೇಳೆ ಸ್ಥಳೀಯ ಬೀಟ್ ಪೊಲೀಸ್ರು ನಿಯಮಿತವಾಗಿ ಆ ಮಹಿಳೆಯ ಮನೆಗೆ ಭೇಟಿ ನೀಡಿ, ಸುತ್ತಮುತ್ತಲಿನ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದಿದ್ದರೆ, ಆ ಒಂಟಿ ಜೀವದ ಜೊತೆ ಖಾಕಿ ಕಣ್ವ ಅಗಲಿದ, ಖಾಕಿ ನರಳಿದೆ ಅನ್ನೋದು ಜಾಹೀರಾಗಿದ್ದಿದ್ರೆ, ಯಾರು ಆಕೆಯ ತಂಟೆಗೆ ಹೋಗ್ತಿದ್ರು..? ಹಂತಕ ಆ ಕೃತ್ಯ ಎಸಗಲು ಹತ್ತು ಬಾರಿ ಯೋಚಿಸ್ತಿದ್ದ ಅಲ್ವಾ..? ಅವತ್ತು, ಖಂಡಿತವಾಗಿಯೂ ಆ ಜೀವವನ್ನು ಉಳಿಸಬಹುದಿತ್ತು ಅಲ್ಲವೇ..? ಹಾಗಿದ್ದಮೇಲೆ ಈ ಬೀಟ್ ಪೊಲೀಸ್ರು ಇರೋದಾದ್ರೂ ಯಾಕ್ರಿ..? ಅನ್ನೋದು ಸಾರ್ವಜನಿಕರ ಅಭಿಪ್ರಾಯ. ದುರಂತ ಅಂದ್ರೆ, ಮಳಗಿ ಘಟನೆಯಿಂದಲೂ ಎಚ್ಚೆತ್ತುಕೊಳ್ಳದ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಇದೀಗ ಆಲಳ್ಳಿಯಲ್ಲೂ ಅಂತಹದ್ದೇ ಮತ್ತೊಂದು ದುರಂತ ಸಂಭವಿಸುವಂತಾಗಿದೆ.

ಇಲಾಖೆ ನಿರ್ಲಕ್ಷ..!
ಅಸಲು, “ಒಂಟಿ ಮಹಿಳೆಯರ ಮೇಲೆ ಪೊಲೀಸ್ರಿಗೆ ಜವಾಬ್ದಾರಿ ಇಲ್ಲವೇ..? ಕೇವಲ ಘಟನೆ ನಡೆದ ಮೇಲೆ ತನಿಖೆ ನಡೆಸುವ ಬದಲು, ಘಟನೆ ನಡೆಯದಂತೆ ತಡೆಯುವುದು ಪೊಲೀಸರ ಕರ್ತವ್ಯವಲ್ಲವೇ..?” ಹಾಗಂತ ಮಳಗಿ, ಆಲಳ್ಳಿ ಸೇರಿದಂತೆ ಮುಂಡಗೋಡ ತಾಲೂಕಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಂಗಾರ ಮತ್ತು ಹಣದ ಆಸೆಗೆ ದುಷ್ಕರ್ಮಿಗಳು ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಅನ್ನೋದು ಸಾಬೀತಾಗಿದ್ರೂ, “ಆಸರೆ” ಯ ಸಮರ್ಪಕ ಅನುಷ್ಟಾನ ಏಕಿಲ್ಲ..?

​ಇನ್ನಾದರೂ ಎಚ್ಚೆತ್ತುಕೊಳ್ಳತ್ತಾ ಇಲಾಖೆ.?
ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರತಿ ಹಳ್ಳಿಯಲ್ಲೂ ಒಂಟಿಯಾಗಿ ವಾಸಿಸುವ ಮಹಿಳೆಯರು ಮತ್ತು ಹಿರಿಯ ನಾಗರಿಕರ ನಿಖರ ಮಾಹಿತಿಯನ್ನು ತಕ್ಷಣವೇ ಸಂಗ್ರಹಿಸಬೇಕು. ಬೀಟ್ ಪೊಲೀಸರ ಭೇಟಿಯನ್ನು ಕಡ್ಡಾಯಗೊಳಿಸಿ, ಮೇಲಧಿಕಾರಿಗಳು ಈ ಬಗ್ಗೆ ಕಾಲಕಾಲಕ್ಕೆ ಪರಿಶೀಲನೆ ನಡೆಸಬೇಕು. ಇಲ್ಲವಾದಲ್ಲಿ, ಜನರ ರಕ್ಷಣೆಗಾಗಿ ಇರುವ ‘ಆಸರೆ’ಯಂತಹ ಉತ್ತಮ ಯೋಜನೆಗಳು ಕೇವಲ ಕಡತಗಳಿಗೆ ಸೀಮಿತವಾಗಿ, ಅಮಾಯಕ ಜೀವಗಳು ಬಲಿಯಾಗೋದು ಮುಂದುವರಿಯತ್ತೆ ಅಷ್ಟೇ..!