ಕಾರವಾರ/ಗೋವಾ: ಗೋವಾ ರಾಜ್ಯದ ಪೊಳೆಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ.

ಗೋವಾದ ಪೊಳೆಂ ರಾಷ್ಟ್ರೀಯ ಹೆದ್ದಾರಿಯ ಮಿಲನ್ ಬಾರ್ ಸಮೀಪ ಸೋಮವಾರ ರಾತ್ರಿ ಈ ದುರಂತ ನಡೆದಿದೆ. ಕರ್ನಾಟಕ ನೋಂದಣಿ ಹೊಂದಿರುವ ದ್ವಿಚಕ್ರ ವಾಹನ (KA-28-EZ-6755) ಅಪಘಾತಕ್ಕೀಡಾಗಿದ್ದು, ಡಿಕ್ಕಿಯ ರಭಸಕ್ಕೆ ವಾಹನದಲ್ಲಿದ್ದ ಇಬ್ಬರೂ ಯುವಕರು ರಸ್ತೆಗೆ ಬಿದ್ದು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ.
ಪೊಲೀಸರ ಭೇಟಿ, ಪರಿಶೀಲನೆ..!
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತಪಟ್ಟ ಯುವಕರ ಗುರುತು ಇನ್ನೂ ಪತ್ತೆಯಾಗಬೇಕಿದ್ದು, ಅಪಘಾತಕ್ಕೆ ನಿಖರ ಕಾರಣ ಏನೆಂಬುದರ ಕುರಿತು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಸರಣಿ ಅಪಘಾತ: ಗಡಿಭಾಗದಲ್ಲಿ ಭೀತಿ..!
ಸೋಮವಾರ ಸಂಜೆಯಷ್ಟೇ ಕಾರವಾರದ ಕಾಳಿ ಸೇತುವೆ ಮೇಲೆ ನಡೆದ ಮತ್ತೊಂದು ರಸ್ತೆ ಅಪಘಾತದಲ್ಲಿ ಓರ್ವ ಯುವಕ ಮೃತಪಟ್ಟು, ಮೂವರು ತೀವ್ರವಾಗಿ ಗಾಯಗೊಂಡಿದ್ದರು. ಈ ದುರಂತದ ಕಾವೇರುವ ಮುನ್ನವೇ ಪೊಳೆಂನಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿರುವುದು ಉತ್ತರ ಕನ್ನಡ ಹಾಗೂ ಗೋವಾ ಗಡಿಭಾಗದ ಜನರಲ್ಲಿ ತೀವ್ರ ಆತಂಕ ಮೂಡಿಸಿದೆ.
