ಧಾರವಾಡ: ಪಶ್ಚಿಮ ಪದವೀಧರ ಚುನಾವಣೆ ಮತ ಎಣಿಕೆ, 3ನೇ ಸುತ್ತಿನಲ್ಲೂ ಬಿಜೆಪಿ ಭರ್ಜರಿ ಮುನ್ನಡೆ

ಧಾರವಾಡ: ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಕಾರ್ಯ ಭರದಿಂದ ಸಾಗಿದ್ದು, ಮೂರನೇ ಸುತ್ತಿನಲ್ಲೂ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಅಭ್ಯರ್ಥಿ ತಮ್ಮ ಬಲವಾದ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ.

​ಮೂರನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದ್ದು, ಬಿಜೆಪಿ ಅಭ್ಯರ್ಥಿಯು ಈ ಸುತ್ತಿನಲ್ಲಿ 6,301 ಮತಗಳನ್ನು ಪಡೆಯುವ ಮೂಲಕ 1,553 ಮತಗಳ ಪ್ರತ್ಯೇಕ ಮುನ್ನಡೆ ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಲಿಂಬಿಕಾಯಿ ಅವರು 4,748 ಮತಗಳನ್ನು ಪಡೆದುಕೊಂಡಿದ್ದಾರೆ.

​ಮೂರು ಸುತ್ತುಗಳ ಎಣಿಕೆ ಮುಕ್ತಾಯದ ವೇಳೆಗೆ ಬಿಜೆಪಿ ಅಭ್ಯರ್ಥಿ ಬೃಹತ್‌ ಮತಗಳ ಮುನ್ನಡೆ ಕಾಯ್ದುಕೊಂಡಿರುವುದು ಕಾರ್ಯಕರ್ತರಲ್ಲಿ ಗೆಲುವಿನ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ. ಕೇಂದ್ರದ ಬಳಿ ಕಮಲ ಪಕ್ಷದ ಪರ ಘೋಷಣೆಗಳು ಮೊಳಗುತ್ತಿದ್ದು, ಜಯದ ವಿಶ್ವಾಸದಲ್ಲಿದ್ದಾರೆ.

​ಇದರೊಂದಿಗೆ, ಮೊದಲ, ಎರಡನೇ ಹಾಗೂ ಮೂರನೇ ಸುತ್ತುಗಳ ಒಟ್ಟು ಮತ ಎಣಿಕೆಯ ಅಂತ್ಯಕ್ಕೆ ಬಿಜೆಪಿ ಅಭ್ಯರ್ಥಿಯು ತಮ್ಮ ಕಾಂಗ್ರೆಸ್ ಎದುರಾಳಿಗಿಂತ ಒಟ್ಟಾರೆಯಾಗಿ 5,109 ಮತಗಳ ಬೃಹತ್ ಮುನ್ನಡೆ ಸಾಧಿಸಿ ಶುಭಾರಂಭ ಕಾಯ್ದುಕೊಂಡಿದ್ದಾರೆ. ಮತ ಎಣಿಕೆ ಕೇಂದ್ರದ ಬಳಿ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಮನೆಮಾಡಿದೆ.

ಪಟಾಕಿ ಸಿಡಿಸಿ ಕಾರ್ಯಕರ್ತರ ಸಂಭ್ರಮ..!
ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಮತ ಎಣಿಕೆಯಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಅಭ್ಯರ್ಥಿ ಸತತ ಮೂರು ಸುತ್ತುಗಳಲ್ಲಿಯೂ ಭಾರಿ ಮುನ್ನಡೆ ಸಾಧಿಸುತ್ತಿದ್ದಂತೆ, ಬಿಜೆಪಿ ಕಾರ್ಯಕರ್ತರು ಮತ ಎಣಿಕೆ ಕೇಂದ್ರದ ಹೊರಭಾಗದಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

​ನಗರದ ಕೃಷಿ ವಿಶ್ವವಿದ್ಯಾಲಯದ ಮತ ಎಣಿಕೆ ಕೇಂದ್ರದ ಮುಂಭಾಗದಲ್ಲಿ ಜಮಾಯಿಸಿದ ಬಿಜೆಪಿ ಬೆಂಬಲಿಗರು ಹಾಗೂ ಅಭಿಮಾನಿಗಳು, ಅಧಿಕೃತ ಫಲಿತಾಂಶ ಪ್ರಕಟಣೆಗೂ ಮುನ್ನವೇ ಪಟಾಕಿ ಸಿಡಿಸಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.