ಕಲಘಟಗಿ-ಮುಂಡಗೋಡ: ಬಸ್ ರದ್ದಿಗೆ ಆಕ್ರೋಶ; ಕೊಪ್ಪ ಗ್ರಾಮದಲ್ಲಿ ವಿದ್ಯಾರ್ಥಿಗಳಿಂದ ರಸ್ತೆ ತಡೆದು ಪ್ರತಿಭಟನೆ..!


​ಮುಂಡಗೋಡ: ಕಲಘಟಗಿಯಿಂದ ಮುಂಡಗೋಡಿಗೆ ಪ್ರತಿದಿನ ಬೆಳಿಗ್ಗೆ 7 ಗಂಟೆಗೆ ಸಂಚರಿಸುವ ಕೆಎಸ್ಆರ್ಟಿಸಿ (KSRTC) ಬಸ್ ಅನ್ನು ಹಠಾತ್ತನೆ ರದ್ದುಗೊಳಿಸಿರುವುದನ್ನು ವಿರೋಧಿಸಿ, ಮುಂಡಗೋಡ ತಾಲೂಕಿನ ಕೊಪ್ಪ ಗ್ರಾಮದ ವಿದ್ಯಾರ್ಥಿಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.

​ಪರೀಕ್ಷಾ ವೇಳೆ ವಿದ್ಯಾರ್ಥಿಗಳಿಗೆ ಕಂಟಕ..!
ನಾಳೆಯಿಂದ ವಿದ್ಯಾರ್ಥಿಗಳಿಗೆ ಅರ್ಧವಾರ್ಷಿಕ ಪರೀಕ್ಷೆಗಳು ಆರಂಭವಾಗುತ್ತಿವೆ. ಆದರೆ, ನಿತ್ಯವೂ ಗ್ರಾಮೀಣ ಭಾಗದಿಂದ ಮುಂಡಗೋಡಿಗೆ ತೆರಳಲು ಆಧಾರವಾಗಿದ್ದ ಬೆಳಿಗ್ಗೆ 7 ಗಂಟೆಯ ಬಸ್ ಸಂಚಾರ ಸ್ಥಗಿತಗೊಂಡಿರುವುದು ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ. ಬಸ್ ಇಲ್ಲದೆ ಸಮಯಕ್ಕೆ ಸರಿಯಾಗಿ ಕಾಲೇಜಿಗೆ ತಲುಪುವುದು ಹೇಗೆ ಎಂದು ಕಂಗಾಲಾಗಿರುವ ವಿದ್ಯಾರ್ಥಿಗಳು, ಸಾರಿಗೆ ಇಲಾಖೆಯ ಬೇಜವಾಬ್ದಾರಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

​ಡಿಪೋ ವಿರುದ್ಧ ಮುನಿಸು..!
ನಾಳೆಯಿಂದ ಹಾನಗಲ್ ಡಿಪೋದಿಂದ ಈ ಮಾರ್ಗಕ್ಕೆ ಬಸ್ ಬರುವುದಿಲ್ಲ ಎಂದು ತಿಳಿದುಬಂದಿದ್ದು, ಇದರಿಂದ ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ಮುಂಡಗೋಡ ಬಸ್ ಡಿಪೋದಿಂದಲೇ ಪರ್ಯಾಯ ಬಸ್ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು ಎಂದು ವಿದ್ಯಾರ್ಥಿಗಳು ಮತ್ತು ಪೋಷಕರು ಬಲವಾಗಿ ಒತ್ತಾಯಿಸಿದ್ದಾರೆ.

ಆಕ್ರೋಶ..!
​KSRTC ಅಧಿಕಾರಿಗಳ ವಿರುದ್ಧ ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದ್ದು, ತಕ್ಷಣವೇ ಮೇಲಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಬಸ್ ವ್ಯವಸ್ಥೆ ಕಲ್ಪಿಸುವವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. Exam ಸಮಯದಲ್ಲಿ ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡುತ್ತಿರುವ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟ ಇಲಾಖೆ ಯಾವ ರೀತಿಯ ತುರ್ತು ಪರಿಹಾರ ನೀಡಲಿದೆ ಎಂಬುದನ್ನು ಕಾದುನೋಡಬೇಕಿದೆ.