ಮಗಳ ಅಗಲಿಕೆಯ ನೋವಿನಲ್ಲೂ ಸಾರ್ಥಕತೆ ಮೆರೆದ ತಂದೆ, ಮುಂಡಗೋಡಿನಲ್ಲಿ ಉಚಿತ ಕುಡಿಯುವ ನೀರಿನ ಘಟಕ ಲೋಕಾರ್ಪಣೆ..!

ಮಗಳನ್ನು ಕಳೆದುಕೊಂಡ ತೀವ್ರ ದುಃಖ ಹಾಗೂ ನೋವಿನ ನಡುವೆಯೂ ಮುಂಡಗೋಡಿನಲ್ಲಿ ತಂದೆಯೊಬ್ಬರು ಸಮಾಜಮುಖಿ ಕಾರ್ಯ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ. ಮುದ್ದು ಮಗಳ ನೆನಪಲ್ಲಿ, ಬಾಯಾರಿದವರ ಬಾಯಾರಿಕೆ ನಿಗಿಸುವ ಸಂಕಲ್ಪ ಮಾಡಿದ್ದಾರೆ.

ಅವಳು ತಂದೆಯ ಮುದ್ದಿನ ಮಗಳು..!
​ಪಟ್ಟಣ ಪಂಚಾಯತಿ ಮಾಜಿ ಸದಸ್ಯ ಶೇಖರ್ ಲಮಾಣಿ ಅವರ 15 ವರ್ಷದ ಮುದ್ದಿನ ಪುತ್ರಿ ಅಂಜನಿ, ಕಳೆದ ಅಕ್ಟೋಬರ್ 23 ರಂದು ಅಕಾಲಿಕವಾಗಿ ನಿಧನರಾಗಿದ್ದರು. ಹತ್ತೊಂಬತ್ತು ದಿನಗಳ ಹಿಂದೆ ಮಗಳನ್ನು ಕಳೆದುಕೊಂಡು ಶೋಕಸಾಗರದಲ್ಲಿ ಮುಳುಗಿದ್ದ ಶೇಖರ್ ಲಮಾಣಿ ಕುಟುಂಬಕ್ಕೆ ಈ ಅಗಲಿಕೆ ಇನ್ನಿಲ್ಲದ ನೋವು ತಂದೊಡ್ಡಿತ್ತು.

ಶ್ಲಾಘನೀಯ ಕಾರ್ಯ..!
​ಆದರೆ, ಈ ಕರುಳಬಳ್ಳಿಯ ಅಗಲಿಕೆಯ ನೋವಿನ ನಡುವೆಯೂ ಶೇಖರ್ ಲಮಾಣಿ ಅವರು ಸಮಾಜಕ್ಕೆ ಮಾದರಿಯಾಗುವಂತಹ ನಿರ್ಧಾರ ಕೈಗೊಂಡಿದ್ದಾರೆ. ತಮ್ಮ ದಿವಂಗತ ಪುತ್ರಿ ಅಂಜನಿ ಅವರ ನೆನಪನ್ನು ಶಾಶ್ವತವಾಗಿ ಉಳಿಸುವ ಉದ್ದೇಶದಿಂದ ಮುಂಡಗೋಡಿನ ಲಂಬಾಣಿ ತಾಂಡಾದಲ್ಲಿ ಸ್ವಂತ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿ, ಸಾರ್ವಜನಿಕರ ಬಳಕೆಗೆ ಉಚಿತವಾಗಿ ಸಮರ್ಪಿಸಿದ್ದಾರೆ.

ಅಂದಹಾಗೆ, ​ಇಂದು (ಮಂಗಳವಾರ) ಮಗಳ ಪುಣ್ಯಸ್ಮರಣೆಯ ಅಂಗವಾಗಿ ಈ ಶುದ್ಧ ಕುಡಿಯುವ ನೀರಿನ ಘಟಕವನ್ನು ಅಧಿಕೃತವಾಗಿ ಲೋಕಾರ್ಪಣೆ ಗೊಳಿಸಲಾಯಿತು. ಮಗಳ ನೆನಪಿನಲ್ಲಿ ತಾಂಡಾದ ಜನರಿಗೆ ಕುಡಿಯುವ ನೀರಿನ ಆಸರೆಯಾಗಿ ನಿಂತ ಶೇಖರ್ ಲಮಾಣಿ ಅವರ ಈ ಮಾನವೀಯ ಹಾಗೂ ಶ್ಲಾಘನೀಯ ಕಾರ್ಯಕ್ಕೆ ಸಾರ್ವಜನಿಕರಿಂದ ಮತ್ತು ಪಟ್ಟಣದ ಪ್ರಮುಖರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.