ಕಾರವಾರ ಸಮೀಪದ ಕಾಳಿ ನದಿ ಸೇತುವೆ ಮೇಲೆ ಪಲ್ಸರ್ ಬೈಕ್ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಸ್ಕೂಟಿ ಸವಾರ ಸ್ಥಳದಲ್ಲೇ ಮೃತಪಟ್ಟು, ಮೂವರು ತೀವ್ರವಾಗಿ ಗಾಯಗೊಂಡಿರುವ ಭೀಕರ ಘಟನೆ ನಡೆದಿದೆ.
ರಾಜಸ್ಥಾನ ಮೂಲದ ಅಶೋಕ ಹೇಮಾರಾಮ ಜೋದಪುರ (ಸದ್ಯ ಕಾರವಾರ ನಿವಾಸಿ) ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ಸ್ಕೂಟಿಯ ಹಿಂಬದಿ ಸವಾರ ಲಕ್ಷ್ಮಣ ಅರ್ಜುನರಾಮ್ ಹಾಗೂ ಪಲ್ಸರ್ ಬೈಕ್ನಲ್ಲಿದ್ದ ಹಾವೇರಿ ಮೂಲದ ಗಣೇಶ ಮತ್ತು ಕಾರವಾರದ ಚಿರಾಗ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ವಿವರ..!
ಕಾಳಿ ನದಿ ಸೇತುವೆ ಮೇಲೆ ಸಾಗುತ್ತಿದ್ದ ಪಲ್ಸರ್ ಬೈಕ್ ಹಾಗೂ ಸ್ಕೂಟರ್ ನಡುವೆ ವೇಗವಾಗಿ ಬಂದ ಚಾಲಕರು ಮುಖಾಮುಖಿ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ಸ್ಕೂಟಿ ಸವಾರ ಅಶೋಕ ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಚಿತ್ತಾಕುಲ ಪೊಲೀಸ್ ಠಾಣೆಯ ಪಿಎಸ್ಐ ಪರಶುರಾಮ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.
