ಮುಂಡಗೋಡ: ತಾಲೂಕಿನ ಬೆಡಸಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂರ್ಲಿ ಸಮೀಪದ ಜಂಬೆಕೊಪ್ಪ ಗ್ರಾಮದಲ್ಲಿ ಕಾಡಾನೆಗಳ ಹಿಂಡು ದಾಳಿ ನಡೆಸಿ, ಅಪಾರ ಪ್ರಮಾಣದ ಬೆಳೆ ನಾಶಪಡಿಸಿರುವ ಘಟನೆ ನಡೆದಿದೆ.

ನವೆಂಬರ್ 5ರ ರಾತ್ರಿ ಗ್ರಾಮಕ್ಕೆ ನುಗ್ಗಿದ ಕಾಡಾನೆಗಳ ಗುಂಪು, ರೈತರ ಜಮೀನಿನಲ್ಲಿ ಬೆಳೆದಿದ್ದ ಬೆಳೆಗಳನ್ನು ತುಳಿದು ಮತ್ತು ತಿಂದು ಧ್ವಂಸಗೊಳಿಸಿವೆ. ಇದರಿಂದಾಗಿ ಸ್ಥಳೀಯ ರೈತರು ತೀವ್ರ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ.
ಜಂಬೆಕೊಪ್ಪ ಗ್ರಾಮದ ರೈತರಾದ ದೇವೇಂದ್ರ ಗಣಪ ನಾಯ್ಕ, ರವಿ ಗಣಪ ನಾಯ್ಕ, ಸುರೇಶ ಗಣಪ ನಾಯ್ಕ ಹಾಗೂ ಸಂತೋಷ ರಾಮು ನಾಯ್ಕ ಅವರಿಗೆ ಸೇರಿದ ಸರ್ವೆ ನಂ. 16/5, 16/1, 16/3 ಮತ್ತು 16/4ರಲ್ಲಿ ಬೆಳೆದಿದ್ದ ಸುಮಾರು 8 ಎಕರೆ ಜಮೀನಿನ ಬೆಳೆ ಸಂಪೂರ್ಣ ಹಾನಿಯಾಗಿದೆ ಎಂದು ನೊಂದ ರೈತರು ಮಾಹಿತಿ ನೀಡಿದ್ದಾರೆ.

ಪರಿಹಾರಕ್ಕೆ ಅರಣ್ಯ ಇಲಾಖೆಗೆ ಮನವಿ..!
ಘಟನೆ ಕುರಿತು ಸಂಕಷ್ಟದಲ್ಲಿರುವ ರೈತರು ಕಾತೂರ ವಲಯ ಅರಣ್ಯಾಧಿಕಾರಿಗಳಿಗೆ ಲಿಖಿತ ದೂರು ಹಾಗೂ ಮನವಿ ಸಲ್ಲಿಸಿದ್ದಾರೆ. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಹಾನಿಯ ಅಂದಾಜು ನಡೆಸಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕಾಡಾನೆಗಳ ಸತತ ಹಾವಳಿಯಿಂದ ಗ್ರಾಮೀಣ ಭಾಗದ ಜನತೆ ಹಾಗೂ ರೈತರು ಭೀತಿಯಲ್ಲಿದ್ದು, ಕಳೆದುಕೊಂಡ ಬೆಳೆಗೆ ತಕ್ಷಣ ಸೂಕ್ತ ನಷ್ಟಪರಿಹಾರ ನೀಡಬೇಕು. ಹಾಗೆಯೇ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
