ಬೆಳಗಾವಿ: ಕಬ್ಬಿನ ದರ ನಿಗದಿಗೆ ಆಗ್ರಹಿಸಿ ಗಡಿಭಾಗದ ಕಬ್ಬು ಬೆಳೆಗಾರರು ನಡೆಸುತ್ತಿದ್ದ ಸುದೀರ್ಘ ಎರಡು ತಿಂಗಳ ಹೋರಾಟ ಕೊನೆಗೂ ಅಂತ್ಯಗೊಂಡಿದ್ದು, ಇಂದಿನಿಂದ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವ ಹಂಗಾಮನ್ನು ಅಧಿಕೃತವಾಗಿ ಆರಂಭಿಸಿವೆ.

ರೈತರು ಪ್ರೋತ್ಸಾಹ ಧನಕ್ಕಾಗಿ ಬಿಗಿಪಟ್ಟು ಹಿಡಿದಿದ್ದರೂ ರಾಜ್ಯ ಸರ್ಕಾರ ಪ್ರೋತ್ಸಾಹ ಧನ ನೀಡಲು ಮುಂದಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ‘ಪ್ರಾಫಿಟ್ ಶೇರಿಂಗ್’ (ಲಾಭ ಹಂಚಿಕೆ) ಸೂತ್ರವನ್ನು ಜಾರಿಗೆ ತರಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಪ್ರಭಾರಿ ಜಿಲ್ಲಾಧಿಕಾರಿ ರಾಹುಲ್ ಶಿಂಧೆ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಕಾರ್ಖಾನೆ ಮಾಲೀಕರು ಮತ್ತು ರೈತ ನಾಯಕರ ನಡುವೆ ಈ ಐತಿಹಾಸಿಕ ಒಪ್ಪಂದ ಏರ್ಪಟ್ಟಿದೆ.
ಏನಿದು ಹೊಸ ಪ್ರಾಫಿಟ್ ಶೇರಿಂಗ್ ಸೂತ್ರ?
ಈ ಮೊದಲು ಕಾರ್ಖಾನೆಗಳ ಒಟ್ಟು ಆದಾಯದ ಮೇಲೆ ಲಾಭದ ಹಂಚಿಕೆ ಮಾಡಲಾಗುತ್ತಿತ್ತು. ಆದರೆ ಈಗ ಸಕ್ಕರೆ ಮಾರಾಟದ ಸರಾಸರಿ ಲಾಭದಲ್ಲಿ ಹಂಚಿಕೊಳ್ಳಲು ಉಭಯ ಕಡೆಯವರು ಸಮ್ಮತಿಸಿದ್ದಾರೆ. ಇದರಂತೆ ಸಕ್ಕರೆ ಮಾರಾಟದಿಂದ ಬರುವ ಲಾಭದಲ್ಲಿ ಶೇ. 75 ರಷ್ಟು ರೈತರಿಗೆ ಹಾಗೂ ಶೇ. 25 ರಷ್ಟು ಕಾರ್ಖಾನೆ ಮಾಲೀಕರಿಗೆ ಹಂಚಿಕೆಯಾಗಲಿದೆ.
ದರ ನಿಗದಿ ವಿವರ (ಪ್ರತಿ ಟನ್ ಕಬ್ಬಿಗೆ)
ಪ್ರಸ್ತುತ ಹಂಗಾಮಿಗೆ ಕಾರ್ಖಾನೆ ಮಾಲೀಕರು ಪ್ರತಿ ಟನ್ ಕಬ್ಬಿಗೆ ರೂ. 3,600 ಆರಂಭಿಕ ದರವನ್ನು ಘೋಷಿಸಿದ್ದಾರೆ.
ಸಕ್ಕರೆ ಬೆಲೆ ರೂ. 48/ಕೆಜಿ: ರೈತರಿಗೆ ರೂ. 38 ಹೆಚ್ಚುವರಿ, ಕಾರ್ಖಾನೆಗೆ ರೂ. 12.
ಸಕ್ಕರೆ ಬೆಲೆ ರೂ. 49/ಕೆಜಿ: ರೈತರಿಗೆ ರೂ. 115 ಹೆಚ್ಚುವರಿ, ಕಾರ್ಖಾನೆಗೆ ರೂ. 35.
ಸಕ್ಕರೆ ಬೆಲೆ ರೂ. 50/ಕೆಜಿ: ರೈತರಿಗೆ ರೂ. 190 ಹೆಚ್ಚುವರಿ, ಕಾರ್ಖಾನೆಗೆ ರೂ. 60.
ಸಕ್ಕರೆ ಬೆಲೆ ರೂ. 55/ಕೆಜಿ: ರೈತರಿಗೆ ರೂ. 565 ಹೆಚ್ಚುವರಿ ಹಾಗೂ ಕಾರ್ಖಾನೆ ಮಾಲೀಕರಿಗೆ ರೂ. 185 ಲಾಭ ಹಂಚಿಕೆಯಾಗಲಿದೆ.
ಹೋರಾಟ ಯಶಸ್ವಿಯಾಗಿ ಅಂತ್ಯಗೊಂಡಿದ್ದು, ಸಚಿವ ಸತೀಶ್ ಜಾರಕಿಹೊಳಿ ಸಮ್ಮುಖದಲ್ಲಿ ನಡೆದ ಒಪ್ಪಂದಕ್ಕೆ ರೈತ ಮುಖಂಡರು ಮತ್ತು ಕಾರ್ಖಾನೆ ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿವೆ.
