ಇಂದಿರಾನಗರದ ಬಳಿ ನಿಂತಿದ್ದ ಟ್ರಾಕ್ಟರ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ, ಓರ್ವನ ಕಾಲಿಗೆ ತೀವ್ರ ಗಾಯ..!

ಮುಂಡಗೋಡ: ತಾಲೂಕಿನ ಕೊಪ್ಪ ಗ್ರಾಮದ ಇಂದಿರಾ ನಗರ ಸಮೀಪದ ಕಲಘಟಗಿ ಮುಖ್ಯ ರಸ್ತೆಯಲ್ಲಿ ಗುರುವಾರ ಭೀಕರ ಅಪಘಾತವೊಂದು ಸಂಭವಿಸಿದ್ದು, ಟ್ರಾಕ್ಟರ್ ಹಾಗೂ ಬಸ್ ನಡುವೆ ಡಿಕ್ಕಿಯಾದ ಪರಿಣಾಮ ಓರ್ವ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದಾರೆ.

​ಸಿಮೆಂಟ್, ಜಲ್ಲಿಕಲ್ಲು ಹಾಗೂ ಕಬ್ಬಿಣದ ಸಾಮಗ್ರಿಗಳನ್ನು ತುಂಬಿಕೊಂಡು ರಸ್ತೆ ಬದಿಯಲ್ಲಿ ನಿಂತಿದ್ದ ಟ್ರಾಕ್ಟರ್‌ಗೆ, ನಂದಿಗಟ್ಟಾದಿಂದ ಮುಂಡಗೋಡ ಕಡೆಗೆ ತೆರಳುತ್ತಿದ್ದ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.

​ಡಿಕ್ಕಿಯ ರಭಸಕ್ಕೆ ಟ್ರಾಕ್ಟರ್ ಪಕ್ಕಕ್ಕೆ ಮಗುಚಿ ಬಿದ್ದಿದ್ದು, ಅದೇ ಸಮಯಕ್ಕೆ ಪಕ್ಕದಲ್ಲೇ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಮೇಲೆ ಬಿದ್ದಿದೆ. ಪರಿಣಾಮ ವ್ಯಕ್ತಿಯ ಕಾಲು ಸಂಪೂರ್ಣವಾಗಿ ಅಪ್ಪಚ್ಚಿಯಾಗಿದ್ದು, ಗಂಭೀರ ಗಾಯಗೊಂಡಿದ್ದಾರೆ.

ಗಾಯಾಳುವನ್ನು ತಕ್ಷಣವೇ ತಾಲೂಕಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.