ಬೆಳಗಾವಿ: ಜಿಲ್ಲೆಯಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿರುವ ಕಬ್ಬು ಬೆಳೆಗಾರರ ಪ್ರತಿಭಟನೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತ ಮುಖಂಡರ ಸಭೆ ನಡೆಸಿದ್ದು, ಪ್ರತಿ ಟನ್ ಕಬ್ಬಿಗೆ ₹3,600 ದರ ಘೋಷಿಸಿದ್ದಾರೆ.

ಕಾರ್ಖಾನೆ ಮಾಲೀಕರು ಈ ದರಕ್ಕೆ ಒಪ್ಪಿಗೆ ನೀಡಿದ್ದು, ನಾಳೆಯಿಂದಲೇ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಲು ಎಲ್ಲರೂ ಸಹಕರಿಸಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ. ಅಲ್ಲದೆ, ಚೂನಪ್ಪ ಪೂಜಾರಿ ಹಾಗೂ ಶಶಿಕಾಂತ ಗುರೂಜಿ ನೇತೃತ್ವದಲ್ಲಿ ನಡೆಯುತ್ತಿರುವ ‘ಜೈಲ್ ಭರೋ’ ಚಳವಳಿಯನ್ನು ಕೈಬಿಡುವಂತೆ ಕೋರಿದ್ದಾರೆ.
ಕಬ್ಬಿನ ರಾಜ್ಯ ಬೆಂಬಲಿತ ಬೆಲೆ (SAP) ಜಾರಿಗೆ ಆಗ್ರಹಿಸಿ ರೈತರು ಮಾಡುತ್ತಿರುವ ಹೋರಾಟದ ಕುರಿತು ಮಾತನಾಡಿದ ಸಚಿವರು, “ಕಾರ್ಖಾನೆಗಳು ಚಾಲನೆಯಾದ ನಂತರ ರೈತರು ಸರ್ಕಾರದ ಬಳಿ ಪ್ರತ್ಯೇಕ ಬೇಡಿಕೆಗಳನ್ನು ಇಡಲಿ. ಒಂದು ವೇಳೆ ಕೇಂದ್ರ ಸರ್ಕಾರದಿಂದ ಎಂಎಸ್ಪಿ (MSP) ಹೆಚ್ಚಳವಾದರೆ ಅದರ ಪೂರ್ಣ ಲಾಭವನ್ನು ರೈತರಿಗೆ ನೀಡಲಾಗುವುದು” ಎಂದು ಭರವಸೆ ನೀಡಿದ್ದಾರೆ.
₹3,650 ನೀಡಲು ರೈತರ ಪಟ್ಟು..! ಇನ್ನು ರೈತ ಹೋರಾಟವನ್ನು ಹಿಂಪಡೆಯಲು ನಿರಾಕರಿಸಿ, ಸಚಿವರ ಘೋಷಣೆಗೆ ಪ್ರತಿಕ್ರಿಯಿಸಿರುವ ರೈತ ಮುಖಂಡ ಚೂನಪ್ಪ ಪೂಜಾರಿ, ಸಚಿವರ ಮಧ್ಯಸ್ಥಿಕೆಯನ್ನು ಸ್ವಾಗತಿಸುತ್ತಲೇ ಪ್ರತಿ ಟನ್ ಕಬ್ಬಿಗೆ ಕನಿಷ್ಠ ₹3,650 ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

”ಇದು ನಮ್ಮ ಪ್ರತಿಭಟನೆಗೆ ಸಿಕ್ಕ ಮೊದಲ ಜಯ. ಆದರೆ, ಮೊತ್ತವನ್ನು ಒಂದೇ ಕಂತಿನಲ್ಲಿ ನೀಡದೆ ಎರಡು ಕಂತುಗಳಲ್ಲಿ ಪಾವತಿಸಲು ಕಾರ್ಖಾನೆ ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತ ಅಧಿಕೃತ ಒಪ್ಪಂದ (Agreed terms) ಮಾಡಿಕೊಳ್ಳಬೇಕು. ನಾಳೆ ಬೆಳಗಾವಿಯ ಚನ್ನಮ್ಮ ವೃತ್ತದ ಬಳಿಯ ಸಿಪಿಎಡ್ (CPEd) ಮೈದಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳು ಆಗಮಿಸಿ ಅಧಿಕೃತವಾಗಿ ಈ ಬೆಲೆಯನ್ನು ಘೋಷಿಸಬೇಕು. ರೈತರು ಒಪ್ಪಿದ ನಂತರವಷ್ಟೇ ಕಾರ್ಖಾನೆಗಳನ್ನು ಆರಂಭಿಸಲು ಬಿಡಲಾಗುವುದು. ಯಾವುದೇ ಕಾರಣಕ್ಕೂ ನಾಳೆಯೇ ಕಾರ್ಖಾನೆ ಆರಂಭಿಸಲು ಬಿಡುವುದಿಲ್ಲ. ಎಲ್ಲವೂ ಇತ್ಯರ್ಥವಾದ ನಂತರ ನಾಡಿದ್ದು ಕಾರ್ಖಾನೆಗಳನ್ನು ತೆರೆಯಲಿ” ಎಂದು ಚೂನಪ್ಪ ಪೂಜಾರಿ ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ, ರಾಜ್ಯ ಸರ್ಕಾರವು ಪ್ರತಿ ಟನ್ ಕಬ್ಬಿಗೆ ₹1,000 ಪ್ರೋತ್ಸಾಹ ಧನ ಘೋಷಿಸಬೇಕು, ಇಲ್ಲದಿದ್ದರೆ ಮುಂಬರುವ ಬೆಳಗಾವಿ ಅಧಿವೇಶನ ನಡೆಯಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದು, ಕೇಂದ್ರ ಸರ್ಕಾರವೂ ಶೀಘ್ರ ಎಂಎಸ್ಪಿ ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ.
ನಿಷೇಧಾಜ್ಞೆ ಜಾರಿ..!
ರೈತರು ನಾಳೆ ‘ಹಿಂಡಲಗಾ ಜೈಲ್ ಭರೋ’ ಚಳವಳಿಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬೆಳಗಾವಿ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNS) ಕಾಯ್ದೆ 163ರ ಅಡಿಯಲ್ಲಿ ಈ ಆದೇಶ ಹೊರಡಿಸಲಾಗಿದ್ದು, ಐದಕ್ಕಿಂತ ಹೆಚ್ಚು ಜನರು ಒಂದೆಡೆ ಸೇರುವುದನ್ನು ನಿಷೇಧಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಪ್ರಕಾಶ್ ನಿಖ್ಖಂ ತಿಳಿಸಿದ್ದಾರೆ. ಈ ಮೂಲಕ ಬೆಳಗಾವಿಯಲ್ಲಿ ರೈತರ ಹೋರಾಟ ಮತ್ತು ಆಡಳಿತದ ನಡುವೆ ಉದ್ವಿಗ್ನ ವಾತಾವರಣ ಮುಂದುವರಿದಿದೆ.
