ಮುಂಡಗೋಡ; ​ಅಟ್ಟಣಗಿ ಬಳಿ ಮಾಸ್ತಿಹಳ್ಳದಲ್ಲಿ ದನ ಮೇಯಿಸಲು ತೆರಳಿದ್ದ ವ್ಯಕ್ತಿ ನೀರುಪಾಲು..? ಈ ಸಾವಿನಲ್ಲಿ ಅನುಮಾನವಂತೆ..!

​ಮುಂಡಗೋಡ: ತಾಲೂಕಿನ ಅಟ್ಟಣಗಿ ಗ್ರಾಮದ ಹತ್ತಿರವಿರುವ ಮಾಸ್ತಿಹಳ್ಳದಲ್ಲಿ ಜಾನುವಾರು ಮೇಯಿಸಲು ತೆರಳಿದ್ದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ. ಮೃತರನ್ನು ಚಳಗೇರಿ ಗ್ರಾಮದ ರೊಂಗು ತಂದೆ ದೋಂಡು ಕೊಕರೇ (38) ಎಂದು ಗುರುತಿಸಲಾಗಿದೆ.

​ಘಟನೆ ಏನು..!
ನವೆಂಬರ್ 4 ರಂದು ಬೆಳಗಿನ ಜಾವ ಈ ಘಟನೆ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಮೃತ ರೊಂಗು ಅವರು ತಮ್ಮ ದನಗಳನ್ನು ಮೇಯಿಸಲು ಅಟ್ಟಣಗಿ ಹತ್ತಿರದ ಮಾಸ್ತಿಹಳ್ಳಕ್ಕೆ ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

​ಮೃತರ ಸಹೋದರ ಭಾಗು ತಂದೆ ದೋಂಡು ಕೊಕರೇ (67) ನೀಡಿದ ದೂರಿನ ಮೇರೆಗೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

​ಸಾವಿನ ಬಗ್ಗೆ ಅನುಮಾನವಂತೆ..!
ಪ್ರದೇಶದಲ್ಲಿ ಆನೆಗಳ ಸಂಚಾರ ಇರುವುದರಿಂದ, ಆನೆಯು ದಾಳಿ ಮಾಡಿ ಕೊಂದಿರಬಹುದು ಅಥವಾ ನೀರು ಕುಡಿಯಲು ಹೋಗಿ ಕಾಲು ಜಾರಿ ಬಿದ್ದು ಮೃತಪಟ್ಟಿರಬಹುದು ಎಂಬ ಸಂಶಯವನ್ನು ದೂರುದಾರರು ವ್ಯಕ್ತಪಡಿಸಿದ್ದಾರೆ. ಸಾವು ಹಾಗೂ ಇದರ ಹಿಂದಿನ ನಿಖರ ಕಾರಣದ ಕುರಿತು ಮುಂಡಗೋಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.