ರಾಜ್ಯದ ನಿಗಮ-ಮಂಡಳಿ ಅಧ್ಯಕ್ಷರ ಪಟ್ಟಿ ಇಂದೇ ಬಿಡುಗಡೆ ಆಗತ್ತಾ..? ಸಿದ್ದಪ್ಪ ಹಡಪದಗೆ ಒಲಿಯಲಿದೆಯೇ ಹಡಪದ ಅಪ್ಪಣ್ಣ ನಿಗಮದ ಪಟ್ಟ..!?

ಮುಂಡಗೋಡ: ​ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ನಿಗಮ-ಮಂಡಳಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ನೇಮಕಾತಿಯ ಅಂತಿಮ ಪಟ್ಟಿ ಬಹುತೇಕ ಸಿದ್ಧಗೊಂಡಿದ್ದು, ಶಾಸಕಾಂಗ ಪಕ್ಷದ ನಾಯಕರ ಜೊತೆಗಿನ ಅಂತಿಮ ಹಂತದ ಚರ್ಚೆಯ ಬಳಿಕ ಅಧಿಕೃತವಾಗಿ ಘೋಷಣೆಯಾಗುವ ಸಾಧ್ಯತೆ ದಟ್ಟವಾಗಿದೆ. ಈ ಬಾರಿಯ ಪಟ್ಟಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿಗೂ ವಿಶೇಷ ಸ್ಥಾನಮಾನ ಸಿಗಲಿದೆಯೇ ಎಂಬ ಚರ್ಚೆಗಳು ತಾಲೂಕಿನಾದ್ಯಂತ ಬಿಸಿಯೇರಿವೆ.

​ಸಿಎಂ-ಡಿಸಿಎಂ ಅಂತಿಮ ಕಸರತ್ತು..!
ನಿಗಮ-ಮಂಡಳಿ ಸ್ಥಾನಗಳಿಗಾಗಿ ಪಕ್ಷದ ಹಿರಿಯ ನಾಯಕರು ಮತ್ತು ಶ್ರಮಿಕ ಕಾರ್ಯಕರ್ತರ ನಡುವೆ ತೀವ್ರ ಪೈಪೋಟಿ ನಡೆದಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರು ಅಂತಿಮ ಸುತ್ತಿನ ಸಮಾಲೋಚನೆ ನಡೆಸುತ್ತಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಪ್ರಾದೇಶಿಕ ಪ್ರಾತಿನಿಧ್ಯದ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ಪೂರ್ಣಗೊಂಡಿದ್ದು, ಇಂದೇ ಅಂತಿಮ ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ.

ಸಿದ್ದಪ್ಪ ಹಡಪದ ಪ್ರಬಲ ಆಕಾಂಕ್ಷಿ..!
ರಾಜ್ಯ ಹಡಪದ ಅಪ್ಪಣ್ಣ ಸಮಾಜದ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಮುಂಡಗೋಡ ಕಾಂಗ್ರೆಸ್ಸಿನ ಸಕ್ರಿಯ ಮುಖಂಡ ಸಿದ್ದಪ್ಪ ಹಡಪದ ಅವರ ಹೆಸರು ಮುಂಚೂಣಿಯಲ್ಲಿದೆ. ಸಮಾಜದ ಸಂಘಟನೆ ಮತ್ತು ಪಕ್ಷದ ಸಂಘಟನೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಸಿದ್ದು ಹಡಪದ ಅವರಿಗೆ ಈ ಗಾದಿ ದಕ್ಕುವುದು ಬಹುತೇಕ ಖಚಿತ ಎಂಬ ಮಾತುಗಳು ಕೇಳಿಬರುತ್ತಿವೆ.

​ಶಾಸಕ ಶಿವರಾಮ್ ಹೆಬ್ಬಾರ್ ಒಲವು..!
ಸ್ಥಳೀಯ ಶಾಸಕ ಶಿವರಾಮ್ ಹೆಬ್ಬಾರ್ ಸೇರಿದಂತೆ ಜಿಲ್ಲೆಯ ಹಲವು ಪ್ರಭಾವಿ ನಾಯಕರು ಸಿದ್ದಪ್ಪ ಹಡಪದ ಅವರ ಪರವಾಗಿ ಪ್ರಬಲವಾಗಿ ಬೆಂಬಲ ಸೂಚಿಸಿದ್ದಾರೆ. ಕ್ಷೇತ್ರದಲ್ಲಿ ಸಮಾಜವನ್ನು ಒಗ್ಗೂಡಿಸಿ ಪಕ್ಷಕ್ಕಾಗಿ ದುಡಿದ ಸಿದ್ದು ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಹೈಕಮಾಂಡ್‌ಗೆ ಮನವಿ ಮಾಡಿರುವುದು ಅವರ ಹಾದಿಯನ್ನು ಸುಗಮಗೊಳಿಸಿದೆ ಎನ್ನಲಾಗಿದೆ.

ಹೀಗಾಗಿ, ​ಹಲವು ನಾಯಕರ ಬೆಂಬಲದೊಂದಿಗೆ ಹಡಪದ ಅಪ್ಪಣ್ಣ ನಿಗಮದ ಅಧ್ಯಕ್ಷ ಹುದ್ದೆಯು ಸಿದ್ದಪ್ಪ ಹಡಪದ ಅವರಿಗೆ ಫಿಕ್ಸ್ ಆದಂತಿದ್ದು, ಮುಂಡಗೋಡ ತಾಲೂಕಿಗೆ ಶುಭ ಸುದ್ದಿ ಸಿಗುವುದೇ ಎಂಬುದನ್ನು ಅಧಿಕೃತ ಘೋಷಣೆಯವರೆಗೆ ಕಾಯ್ದು ನೋಡಬೇಕಿದೆ.