ಮುಂಡಗೋಡ: ಅಪ್ರಾಪ್ತ ಬಾಲಕಿ ಮೇಲೆ ನಡೆದ ದೌರ್ಜನ್ಯ ಖಂಡಿಸಿ ನಾಳೆ (ಗುರುವಾರ) ಮುಂಡಗೋಡ ಬಂದ್ಗೆ ಕರೆ ನೀಡಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಇಲಾಖೆಯು ಸಂಪೂರ್ಣ ಅಲರ್ಟ್ ಆಗಿದೆ.ವಿವಿಧ ಹಿಂದುಪರ ಸಂಘಟನೆಗಳು ಹಾಗೂ ತಾಲೂಕಿನ ವಿವಿಧ ಸಂಘಟನೆಗಳು ಈ ಬಂದ್ಗೆ ಬೆಂಬಲ ಸೂಚಿಸಿದ್ದು, ಘಟನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

SP ನೇತೃತ್ವದಲ್ಲಿ ಬಂದೋಬಸ್ತ್..!
ಮುಂಡಗೋಡ್ ಬಂದ್ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಅಲರ್ಟ್ ಆಗಿದ್ದು ಭಾರೀ ಬಿಗಿ ಬಂದೋಬಸ್ತ್ ಕಲ್ಪಿಸಲಾಗುತ್ತಿದೆ. ಉತ್ತರ ಕನ್ನಡ ಎಸ್ಪಿ ದೀಪನ್ ಎಂ.ಎನ್. ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಬಂದ್ ಹಿನ್ನೆಲೆಯಲ್ಲಿ ಓರ್ವ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (Addl. SP), 1 ಕೆಎಸ್ಆರ್ಪಿ (KSRP) ತುಕಡಿ, 4 ಡಿಎಆರ್ (DSR) ವ್ಯಾನ್, 5 ಜನ ಪೊಲೀಸ್ ನಿರೀಕ್ಷಕರು (PI), 10 ಜನ ಉಪನಿರೀಕ್ಷಕರು (PSI), 10 ಜನ ಎಎಸ್ಐ ಹಾಗೂ 50ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ರಾತ್ರಿಯಿಂದಲೇ ಪೆಟ್ರೋಲಿಂಗ್..
ಇಂದು ರಾತ್ರಿಯಿಂದಲೇ ಪೊಲೀಸ್ ಇಲಾಖೆಯಿಂದ ತಾಲೂಕಿನಾದ್ಯಂತ ಗಸ್ತು (ಪೆಟ್ರೋಲಿಂಗ್) ನಡೆಸಲಾಗುತ್ತಿದ್ದು, ನಾಳೆ ಬೆಳಿಗ್ಗೆಯಿಂದಲೇ ಸೂಕ್ಷ್ಮ ಹಾಗೂ ಪ್ರಮುಖ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮುಂದುವರಿಯಲಿದೆ ಎಂದು ಪೊಲೀಸ್ ಮೂಲಗಳು ‘ಪಬ್ಲಿಕ್ ಫಸ್ಟ್’ಗೆ ಮಾಹಿತಿ ನೀಡಿವೆ.
