ಶಿಗ್ಗಾಂವ: ಭಾರತೀಯ ವಾಯುಪಡೆಗೆ (Indian Air Force) ಸೇರಿದ ಹೆಲಿಕಾಪ್ಟರ್ವೊಂದು ತಾಂತ್ರಿಕ ದೋಷದಿಂದಾಗಿ ಶಿಗ್ಗಾಂವ ತಾಲೂಕಿನ ಕಾಮನಹಳ್ಳಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದಲ್ಲಿರುವ ಹೊಲದಲ್ಲಿ ಬುಧವಾರ ಸಂಜೆ ತುರ್ತು ಲ್ಯಾಂಡಿಂಗ್ ಆಗಿದೆ.

ಬುಧವಾರ ಸಂಜೆ 5:45 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ತಮಿಳುನಾಡಿನ ಸುಲೂರಿನಿಂದ ಬೆಳಗಾವಿಯತ್ತ ಪ್ರಯಾಣಿಸುತ್ತಿದ್ದ ‘ZD 4050’ ನೋಂದಣಿ ಸಂಖ್ಯೆಯ ಈ ಹೆಲಿಕಾಪ್ಟರ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಪೈಲಟ್ ದೀಪಕ್ ಶರ್ಮಾ ಅವರು ಮುನ್ನೆಚ್ಚರಿಕಾ ಕ್ರಮವಾಗಿ ಕಾಮನಹಳ್ಳಿ ಗ್ರಾಮದ ಹಾದಿಮನಿ ಎಂಬುವರ ಹೊಲದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ.
ಹೆಲಿಕಾಪ್ಟರ್ನಲ್ಲಿ ಪೈಲಟ್ ದೀಪಕ್ ಶರ್ಮಾ ಸೇರಿದಂತೆ ಒಟ್ಟು 6 ಜನರಿದ್ದ ಉದ್ಯೋಗಿಗಳ ತಂಡ ಪ್ರಯಾಣಿಸುತ್ತಿತ್ತು. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳು ಸಂಭವಿಸಿಲ್ಲ.
ಘಟನಾ ಸ್ಥಳಕ್ಕೆ ಶಿಗ್ಗಾಂವ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಭದ್ರತೆ ಒದಗಿಸಿದ್ದಾರೆ. ಪರಿಸ್ಥಿತಿಯ ಮೇಲೆ ನಿರಂತರ ನಿಗಾ ವಹಿಸಲಾಗಿದೆ.
