ಮುಂಡಗೋಡ ತಾಲೂಕಿನಲ್ಲಿ ಇತ್ತೀಚೆಗೆ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಹೇಯ ಲೈಂಗಿಕ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿ, ಆರೋಪಿಗೆ ಕಠಿಣ ಕಾನೂನು ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಶುಕ್ರವಾರ ಮುಂಡಗೋಡ ಮುಸ್ಲಿಂ ಸಮುದಾಯದ ವತಿಯಿಂದ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಲಾಯಿತು.

ಮುಂಡಗೋಡ ಮುಸ್ಲಿಂ ಸಮುದಾಯದ ‘ಅಹ್ಲ್-ಎ-ಸುನ್ನತ್ ಜಮಾತ್’, ‘ನೂರಾನಿ ಜಮಾತ್’ ಹಾಗೂ ‘ಕರ್ನಾಟಕ ರಾಜ್ಯ ಉಲಮಾ ಸೊಸೈಟಿ (ರಿ)’ ಮುಂಡಗೋಡ ತಾಲೂಕು ಶಾಖೆಯ ನೇತೃತ್ವದಲ್ಲಿ ಸುಮಾರು 80ಕ್ಕೂ ಹೆಚ್ಚು ಜನರು ನೂರಾನಿ ಮಸೀದಿಯಿಂದ ಮೆರವಣಿಗೆಯ ಮೂಲಕ ಮುಂಡಗೋಡ ಪೊಲೀಸ್ ಠಾಣೆಗೆ ತೆರಳಿ ಮನವಿ ಪತ್ರ ಸಲ್ಲಿಸಿದರು.

ಇಡೀ ಸಮಾಜವೇ ತಲೆತಗ್ಗಿಸುವಂತಹ ಈ ಅಮಾನವೀಯ ಕೃತ್ಯ ಎಸಗಿದ ಆರೋಪಿಯ ವಿರುದ್ಧದ ತನಿಖೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಬೇಕು ಹಾಗೂ ತ್ವರಿತ ನ್ಯಾಯಾಲಯದಲ್ಲಿ (Fast-Track Court) ವಿಚಾರಣೆ ನಡೆಸಿ ಗರಿಷ್ಠ ಶಿಕ್ಷೆ ಕೊಡಿಸಬೇಕು. ನೊಂದ ಬಾಲಕಿಗೆ ಉತ್ತಮ ವೈದ್ಯಕೀಯ ನೆರವು, ಸೂಕ್ತ ರಕ್ಷಣೆ ಹಾಗೂ ಸರ್ಕಾರದಿಂದ ಸಿಗಬೇಕಾದ ಪರಿಹಾರವನ್ನು ಕೂಡಲೇ ಒದಗಿಸಬೇಕು ಎಂದು ಮುಸ್ಲಿಂ ಸಮುದಾಯದ ಮುಖಂಡರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಉಲಮಾ ಸೊಸೈಟಿ ಅಧ್ಯಕ್ಷರಾದ ಸಯ್ಯದ್ ಮೊಯಿನುದ್ದೀನ್ ಖಾದರಿ, ಕಾರ್ಯದರ್ಶಿ ಹಜರತ್ ಅಲಿ ಸುಳ್ಳಳ್ಳಿ, ಸದಸ್ಯರಾದ ಮೌಲಾನ ಹಜರತ್ ಬಿಲಾಲ್, ಹಫೀಜ್ ಅಶ್ಫಾಕ್, ಹಫೀಜ್ ಇಬ್ರಾಹಿಂ ಬರ್ಕಾತಿ, ಹಫೀಜ್ ಮೊಯಿನುದ್ದೀನ್, ಮೌಲಾನ ಅಜೀಮ್, ಮೌಲಾನ ಜಹೀರ್ ಬರ್ಕಾತಿ, ಮೌಲಾನಾ ಅಲೀಮ್, ಹಫೀಜ್ ಆಸೀಫ್, ಮೌಲಾನ ಮೊಹಮ್ಮದ್ ಅಹಮದ್ ಪಾಳಾ ಸೇರಿದಂತೆ ಮುಂಡಗೋಡ ಜಮಾತಿನ ಮುಖಂಡರು ಹಾಗೂ ಯುವಕರು ಭಾಗವಹಿಸಿದ್ದರು.
