ಮುಂಡಗೋಡ ತಾಲೂಕಿನ ಆಲಳ್ಳಿ ಗ್ರಾಮದಲ್ಲಿ ನಡೆದಿದ್ದ 75 ವರ್ಷದ ವೃದ್ಧೆ ಕಮಲವ್ವ ತಿರಕಪ್ಪ ಆಡೂರ ಭೀಕರ ಹತ್ಯೆ ಕೇಸನ್ನು ಬೇಧಿಸುವಲ್ಲಿ ಮುಂಡಗೋಡ ಹಾಗೂ ಶಿರಸಿಯ ಚಾಣಾಕ್ಷ ಪೊಲೀಸ್ ಕ್ರೈಂ ಟೀಂ ಯಶಸ್ವಿಯಾಗಿದೆ. ಅಕ್ಷರಶಃ ಸವಾಲಾಗಿದ್ದ ಈ ಪ್ಲ್ಯಾನ್ಡ್ ಮರ್ಡರನ ಹಂತಕನನ್ನು ಬಂಧಿಸಿದ್ದಾರೆ, ಹಂತಕನ ಜೊತೆ ಜೊತೆಗೆ ಕೃತ್ಯಕ್ಕೆ ಬಳಸಿದ್ದ ಮೋಟಾರ್ ಸೈಕಲ್ ಹಾಗೂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಅವತ್ತು ಅಕ್ಟೋಬರ್ 25 ರ ರಾತ್ರಿ..!
ಅಕ್ಟೋಬರ್ 25ರ ರಾತ್ರಿ, ತನ್ನ ಮನೆಯಲ್ಲೇ ಮಲಗಿದ್ದ, ವೃದ್ದೆ ಕಮಲವ್ವ ಬೆಳಗಾಗುವಷ್ಟರಲ್ಲಿ ಹೆಣವಾಗಿದ್ದರು. ಅಕ್ಷರಶಃ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮೃತದೇಹ ಕಂಡು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದರು. ಇದೇ ವೇಳೆ ಮನೆಯಲ್ಲಿದ್ದ ನಗದು ಹಣ ಹಾಗೂ ಚಿನ್ನಾಭರಣಗಳನ್ನೂ ಕೂಡ ದೋಚಿ ಪರಾರಿಯಾಗಿದ್ದ ಹಂತಕ. ಆದ್ರೆ, ಬೆತ್ತಲೆಯಾಗಿದ್ದ ಬಿದ್ದಿದ್ದ ಶವ ಬಿಟ್ರೆ ಹಂತಕ ಅಲ್ಲಿ ಸಣ್ಣದೊಂದು ಕೊಲೆಯ ಕುರುಹನ್ನೂ ಬಿಟ್ಟು ಹೋಗಿರಲಿಲ್ಲ. ಹೀಗಾಗಿ, ಆಕೆಯ ಪುತ್ರ ರಾಘವೇಂದ್ರ ನೀಡಿದ್ದ ದೂರಿನ ಮೇಲೆ ತನಿಖೆಗಿಳಿದಿದ್ದ ಮುಂಡಗೋಡ ಹಾಗೂ ಶಿರಸಿ ಕ್ರೈಂ ಪೊಲೀಸ್ರಿಗೆ ಹಂತಕನ ಪತ್ತೆ ಅನ್ನೋದು ಸವಾಲಾಗಿತ್ತು.

ಆರೋಪಿ ಮಾರುತಿ ಆರೆಸ್ಟ್..!
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಶಿರಸಿ ಉಪ ವಿಭಾಗದ ಅಧಿಕಾರಿ ಹಾಗೂ ಅಪರಾಧ ವಿಭಾಗದ ಸಿಬ್ಬಂದಿಗಳ ತಂಡವು ಆರೋಪಿಗಾಗಿ ತೀವ್ರ ಹುಡುಕಾಟ ನಡೆಸಿತ್ತು. ನವೆಂಬರ್ 13ರಂದು ಸಂಜೆ ಆರೋಪಿ ಇರುವ ಖಚಿತ ಮಾಹಿತಿ ಮೇರೆಗೆ, ಕಾರ್ಯಾಚರಣೆ ನಡೆಸಿದ ಮುಂಡಗೋಡ ಪೊಲೀಸ್ರಿಗೆ ಆರೋಪಿ ಬಲೆಗೆ ಬಿದ್ದಿದ್ದಾನೆ. ಅಂದಹಾಗೆ ವೃದ್ದೆಯ ಕೊಲೆ ಮಾಡಿದ್ದ ಹಂತಕ ಆರೋಪಿಯ ಹೆಸ್ರು ಮಾರುತಿ ಅಡಿವೆಪ್ಪ ಮೂಡಸಾಲಿ..!

ಚಿನ್ನಾಭರಣಕ್ಕಾಗಿ ಮರ್ಡರ್..!
ಇನ್ನು ಯಾಕಯ್ಯ ಮುದುಕಿಯನ್ನ ಹಾಗೆ ಕೊಂದು ಹಾಕಿದೆ ಅಂತ ಪೊಲೀಸ್ರು ಹಂತಕನನ್ನು ಪ್ರಶ್ನಿಸಿದಾಗ, ವೃದ್ದೆಯ ಬಳಿಯಿದ್ದ ಚಿನ್ನಾಭರಣ ಆಕೆಯನ್ನ ಕೊಲ್ಲುವಂತೆ ಮಾಡಿತು ಅಂತಾ ಆರೋಪಿ ಬಾಯ್ಬಿಟ್ಟಿದ್ದಾನಂತೆ. ಹೀಗಾಗಿ,
ಆರೋಪಿಯಿಂದ ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ವಶಪಡಿಸಿಕೊಂಡ ಪೊಲೀಸ್ರು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇನ್ನು ಯಾವುದೇ ಸಿಸಿಟಿವಿ ದೃಶ್ಯಗಳು ಅಥವಾ ಪ್ರತ್ಯಕ್ಷ ಸಾಕ್ಷಿದಾರರು ಲಭ್ಯವಿಲ್ಲದಿದ್ದರೂ, ಪೊಲೀಸರು ತಮ್ಮ ಜಾಣ್ಮೆಯಿಂದ ಕೃತ್ಯ ಎಸಗಿದಾತನನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಉತ್ತರ ಕನ್ನಡ ಎಸ್ಪಿ ದೀಪನ್ ಎಮ್.ಎನ್, ಹೆಚ್ವುವರಿ ಎಸ್ಪಿ ಕೃಷ್ಣಮೂರ್ತಿ ಜಿ. ಶಿರಸಿ ಡಿವೈಎಸ್ಪಿ ಶ್ರೀಮತಿ ಗೀತಾ ಪಾಟೀಲ ಮಾರ್ಗದರ್ಶನದಲ್ಲಿ, ಮುಂಡಗೋಡ ಪಿಐ ರಮೇಶ್ ಹನಾಪುರ, ಪಿಎಸ್ಐ ಮಂಜುನಾಥ ಗೌಡರ, ಕ್ರೈಂ ಪಿಎಸ್ಐ ರವೀಂದ್ರ ಜಾರಾದರ, ಮತ್ತೋರ್ವ ಪಿಎಸ್ಐ ನಿಂಗರಾಜು ಕರಡಿಗುಡ್ಡಿ ನೇತೃತ್ವದಲ್ಲಿ, ಶಿರಸಿ ಉಪ ವಿಭಾಗದ ಅಪರಾಧ ವಿಭಾಗದ ಸಿಬ್ಬಂದಿಗಳಾದ ಶಿರಸಿ ನಗರ ಠಾಣೆಯ ಬಸವರಾಜ ಹಗರಿ, ಕೋಟೇಶ್ವರ ನಾಗರೊಳ್ಳಿ ಹಾಗೂ ಮುಂಡಗೋಡ ಪೊಲೀಸ್ ಠಾಣೆಯ ಬಸವರಾಜ ಮ್ಯಾಗೇರಿ, ಅಣ್ಣಪ್ಪ ಬುಡಗೇರಿ, ತಿರುಪತಿ ಚೌಡಣ್ಣವರ, ಬಸವರಾಜ ಮಾಳಪ್ಪನವರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಭಿನಂದಿಸಿ ಪ್ರಶಂಸಿಸಿದ್ದಾರೆ.
