ಭಟ್ಕಳ ತಾಲೂಕಿನ ಅಳ್ವೇಕೋಡಿ ಸಮುದ್ರ ತೀರದಲ್ಲಿ ಭಾನುವಾರ ಭೀಕರ ದುರಂತ ಸಂಭವಿಸಿದ್ದು, ಒಂದೇ ಕುಟುಂಬದ ಎಂಟು ಮಂದಿ ಅಲೆಗಳ ಅಬ್ಬರಕ್ಕೆ ಕೊಚ್ಚಿಹೋಗಿ ಶೌಅಗಿದ್ದಾರೆ. ಜೊತೆಗೆ ಮೂವರು ನಾಪತ್ತೆಯಾಗಿದ್ದಾರೆ.

ರಜಾದಿನದ ಹಿನ್ನೆಲೆಯಲ್ಲಿ ಒಟ್ಟು 13 ಮಂದಿ ಸೇರಿ ಸಮುದ್ರ ತೀರಕ್ಕೆ ತೆರಳಿದ್ದರು. ಈ ವೇಳೆ ಕೆಲವರು ಚಿಪ್ಪು ಸಂಗ್ರಹಿಸಲು ಸಮುದ್ರಕ್ಕೆ ಇಳಿದಾಗ, ಅಕಸ್ಮಾತ್ ಏರಿದ ದೈತ್ಯ ಅಲೆಗಳ ಸೆಳೆತಕ್ಕೆ ಸಿಲುಕಿ ಹಲವರು ನೀರಿನಲ್ಲಿ ಕಾಣೆಯಾಗಿದ್ದಾರೆ.
ಈ ಅವಘಡದಲ್ಲಿ ಮೃತಪಟ್ಟ ಎಂಟು ಮಂದಿಯೂ ಒಂದೇ ಕುಟುಂಬಕ್ಕೆ ಸೇರಿದವರು ಎಂದು ತಿಳಿದುಬಂದಿದೆ. ನಾಪತ್ತೆಯಾದ ಮೂವರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಮೃತಪಟ್ಟವರು..!
ಲಕ್ಷ್ಮಿ ಮಹಾದೇವ ನಾಯ್ಕ (42) ಪಡುಶಿರಾಲಿ ಬೆಂಗ್ರೆ, ಉಮೇಶ ನಾಯ್ಕ (30) ಶಾರದಾಹೊಳೆ, ಲಕ್ಷ್ಮಿ ನಾಯ್ಕ (30), ಲಕ್ಷ್ಮಿ ಅಣ್ಣಪ್ಪ ನಾಯ್ಕ (60), ಲಕ್ಷ್ಮಿ ಶಿವರಾಮ ನಾಯ್ಕ (49), ಜ್ಯೋತಿ ನಾಗಪ್ಪ ನಾಯ್ಕ (34), ಮಾಲತಿ ನಾಯ್ಕ (38) ಮಾಸ್ತಮ್ಮ ನಾಯ್ಕ ಘಟನೆಯಲ್ಲಿ ಮೃತಪಟ್ಟವರಾಗಿದ್ದಾರೆ.
ಮೃತದೇಹಗಳಲ್ಲಿ ಆರು ಮಂದಿಯ ಶವಗಳನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಇನ್ನೆರಡು ಮೃತದೇಹಗಳನ್ನು ಆರ್.ಎನ್.ಎಸ್ ಆಸ್ಪತ್ರೆಗೆ ಸಾಗಿಸಲಾಗಿದೆ.
ಸ್ಥಳೀಯರ ಪ್ರಕಾರ, ನೀರಿಗೆ ಇಳಿದಿದ್ದವರು ಒಬ್ಬರ ಕೈಯನ್ನು ಮತ್ತೊಬ್ಬರು ಹಿಡಿದುಕೊಂಡು ಸಾಗುತ್ತಿದ್ದರು. ಆದರೆ ಹಿಂದಿನ ದಿನ ಸುರಿದ ಭಾರಿ ಮಳೆಯಿಂದಾಗಿ ಹೊಳೆಯಲ್ಲಿ ನೀರಿನ ಹರಿವು ತೀವ್ರವಾಗಿತ್ತು.
ಇದೇ ವೇಳೆ ಸಮುದ್ರದ ಅಲೆಗಳ ಅಬ್ಬರವೂ ಜೋರಾಗಿದ್ದರಿಂದ ನೀರಿನ ಮಟ್ಟ ದಿಢೀರನೆ ಏರಿಕೆಯಾಗಿದೆ. ನೀರಿನ ರಭಸಕ್ಕೆ ಸಿಲುಕಿ ಸಮತೋಲನ ಕಳೆದುಕೊಂಡ ಕೆಲವರು ಆಳಕ್ಕೆ ಕೊಚ್ಚಿ ಹೋಗಿದ್ದಾರೆ. ಈ ವೇಳೆ ಮುಳುಗುತ್ತಿದ್ದವರನ್ನು ರಕ್ಷಿಸಲು ಹೋದ ಕುಟುಂಬದ ಉಳಿದವರೂ ನೀರಿನ ಸೆಳೆತಕ್ಕೆ ಸಿಲುಕಿದ್ದರಿಂದ ದುರಂತದ ತೀವ್ರತೆ ಹೆಚ್ಚಾಗಿದೆ ಎನ್ನಲಾಗಿದೆ.
ಮೃತರು ಶಿರಾಲಿಯವರು..!
ಮೃತರು ಭಟ್ಕಳ ತಾಲೂಕಿನ ಸಾರದಹೊಳೆಯ ಹೆರಿಹಿತ್ಲು ಗ್ರಾಮದವರು ಎಂದು ತಿಳಿದುಬಂದಿದೆ. ಘಟನೆಯಲ್ಲಿ ನಾಗರತ್ನಾ ಮತ್ತು ಮಹಾದೇವಿ ಎಂಬ ಇಬ್ಬರು ಮಹಿಳೆಯರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರು ಮತ್ತು ರಕ್ಷಣಾ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ನಡೆಸಿ ಅವರನ್ನು ರಕ್ಷಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಕುರಿತು ವೈದ್ಯರು ನಿಗಾ ವಹಿಸಿದ್ದಾರೆ.
ಒಂದೇ ಘಟನೆಯಲ್ಲಿ ಎಂಟು ಮಂದಿ ಸಾವನ್ನಪ್ಪಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಪಡುಶಿರಾಲಿ, ಶಾರದಾಹೊಳೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ. ಮನೆಗೆ ಮರಳಬೇಕಿದ್ದ ಕುಟುಂಬ ಸದಸ್ಯರು ಶವವಾಗಿ ಬಂದಿರುವ ದೃಶ್ಯ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ನಾಪತ್ತೆಯಾದವರ ಶೋಧ ಕಾರ್ಯಾಚರಣೆ ಮುಂದುವರಿಸುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ.
