ಮುಂಡಗೋಡ ಅರಣ್ಯ ಇಲಾಖೆಯಲ್ಲಿರೋ ಕೆಲ ತಿಮಿಂಗಿಲುಗಳಿಗೆ ಓರ್ವ ರೈತ ಸರಿಯಾದ ಶಾಸ್ತಿ ಮಾಡಿಸ್ತಿದಾನೆ. ತಾಲೂಕಿನ ಉಗ್ನಿಕೇರಿಯ ರೈತನೋರ್ವನ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ DyRFO ಹಾಗೂ ಬೀಟ್ ಫಾರೆಸ್ಟ್ ಗಾರ್ಡ್ ಮೇಲೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ. ಪರಿಣಾಮ ಹಳೆಯ ಮನೆಯಲ್ಲಿದ್ದ ಕಟ್ಟಿಗೆಗಳಿಗೆ ಪಾಸ್ ನೀಡಲು 10 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳ ಮೇಲೆ FIR ದಾಖಲಾಗಿದೆ.

DyRFO ಬಸವರಾಜ್ ಮೊದಲನೇ ಆರೋಪಿ..!
ಅಂದಹಾಗೆ, ಮುಂಡಗೋಡ ತಾಲೂಕಿನ ಯರೇಬೈಲ್ ಉಪವಲಯ ಅರಣ್ಯಾಧಿಕಾರಿ ಬಸವರಾಜ್ ಯಾದವಾಡ ಹಾಗೂ ಉಗ್ನಿಕೇರಿ ಬೀಟ್ ಫಾರೆಸ್ಟ್ ಗಾರ್ಡ್ ನಿಸಾರ್ ಪಾಶಾ ಇಬ್ಬರೂ ಸೇರಿ, ರೈತನಿಂದ 10 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಹೊತ್ತಿದ್ದಾರೆ. ಹೀಗಾಗಿ ಇವರೀರ್ವರ ಮೇಲೆ ಈಗ ಲೋಕಾಯುಕ್ತ ಕಚೇರಿಯಲ್ಲಿ FIR ದಾಖಲಾಗಿದೆ.

ಅಷ್ಟಕ್ಕೂ ದೂರಿನಲ್ಲಿ ಏನಿದೆ..?
ಮುಂಡಗೋಡ ತಾಲೂಕಿನ ಉಗ್ನಿಕೇರಿ ಗ್ರಾಮದ ನಿವಾಸಿ ರಮೇಶ್ ವಾಲ್ಮೀಕಿ ಲೋಕಾಯುಕ್ತರಿಗೆ ನೀಡಿದ ದೂರಿನಲ್ಲಿ ಹೀಗೇ ಆರೋಪಿಸಿದ್ದಾರೆ. ಮುಂಡಗೋಡ ತಾಲೂಕಿನ ಗುಂಜಾವತಿ ವ್ಯಾಪ್ತಿಯ ಉಗ್ನಿಕೇರಿ ಗ್ರಾಮದಲ್ಲಿ ಮನೆ ಸಂಖ್ಯೆ 1/223 ನೇದನ್ನು ಹೊಂದಿದ್ದು, ಸದರಿ ಮನೆಯು ಶಿಥಿಲಾವಸ್ಥೆಯಲ್ಲಿರುವುದರಿಂದ ಅದನ್ನು ನೆಲಸಮಗೊಳಿಸಿ, ಅಲ್ಲಿ ಹೊಸ ಮನೆಯನ್ನು ಕಟ್ಟಲು ನಿರ್ಧರಿಸಿದ್ದರು. ಹೀಗಾಗಿ, ಆ ವಾಸದ ಮನೆಯಲ್ಲಿ ಹಳೆಯ ಕಟ್ಟೆಗೆ ಹಾಗೂ ಮನೆಗೆ ಅಳವಡಿಸಿದ ಕಟ್ಟಿಗೆಗಳ ಕೆತ್ತನೆ ಕೆಲಸವನ್ನು ಮಾಡಲು ಅರಣ್ಯ ಇಲಾಖೆಯ ಅನುಮತಿಯನ್ನು ಪಡೆದುಕೊಳ್ಳಬೇಕಾಗಿತ್ತು. ಹೀಗಾಗಿ, ಆ ಕುರಿತು ವಲಯ ಅರಣ್ಯಾಧಿಕಾರಿಗಳ ಕಛೇರಿ ಮುಂಡಗೋಡಕ್ಕೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿ ಮುಂಡಗೋಡಿನ ಗುಂಜಾವತಿ ಫಾರೆಸ್ಟ್ ನಾಕಾದ ವ್ಯಾಪ್ತಿಗೆ ಬರುತ್ತಿದ್ದರಿಂದ, ಮುಂದಿನ ಕ್ರಮಕ್ಕಾಗಿ ಗುಂಜಾವತಿ ಶಾಖೆಗೆ ವರ್ಗಾವಣೆಗೊಂಡಿತ್ತು..

ಅದು ಗುಂಜಾವತಿ ಫಾರೆಸ್ಟ್ ನಾಕಾ..!
ಹೀಗಾಗಿ, ಗುಂಜಾವತಿ ಫಾರೆಸ್ಟ್ ನಾಕಾದಲ್ಲಿ ರೋ DyRFO ಬಸವರಾಜ್ ಯಾದವಾಡ್ ಹಾಗೂ ಉಗ್ನಿಕೇರಿ ಬೀಟ್ ಫಾರೆಸ್ಟ್ ಗಾರ್ಡ್ ಆಗಿ ಕಾರ್ಯ ನಿರತವಹಿಸ್ತಿರೊ ನಿಸಾರ್ ಎಂಬುವವರು ಇಬ್ಬರೂ ಸೇರಿ, ದೂರುದಾರ ರಮೇಶ್ ವಾಲ್ಮೀಕಿ ಎಂಬುವವರ ವಾಸದ ಮನೆಗೆ ಬಂದು ಅಲ್ಲಿನ ಕಟ್ಟಿಗೆಗಳ ಅಳತೆ ಇತ್ಯಾದಿಗಳನ್ನು ಕೈಗೊಂಡು ಅದರ ಪಂಚನಾಮೆ ನಡೆಸಿದ್ದರು. ಅಲ್ದೆ, ಅರಣ್ಯ ಇಲಾಖೆಯ ಅನುಮತಿ ಪತ್ರವನ್ನು ನೀಡುವುದಾಗಿ ಫಿರ್ಯಾದಿಯವರಿಗೆ ಗುಂಜಾವತಿ ಅರಣ್ಯ ನಾಕಾಕ್ಕೆ ಕರೆಯಿಸಿಕೊಂಡಿದ್ದರು.

10 ಸಾವಿರ ಲಂಚಕ್ಕೆ ಬೇಡಿಕೆ..!
ಇನ್ನು, ದೂರುದಾರ ರಮೇಶ್ ವಾಲ್ಮೀಕಿಯವರನ್ನು ಕಚೇರಿಗೆ ಕರೆಸಿಕೊಂಡ ಆ ಇಬ್ಬರೂ ಅಧಿಕಾರಿಗಳು, ಆ ಕೆಲಸ ಮಾಡಬೇಕಂದ್ರೆ ನಮಗೆ 10 ಸಾವಿರ ಹಣ ನೀಡಬೇಕು ಅಂತಾ ಬೇಡಿಕೆ ಇಟ್ಟಿದ್ದರು. ಆದ್ರೆ, ದೂರುದಾರ ರಮೇಶ್ ಆ ಅಧಿಕಾರಿಗಳ ಬೇಡಿಕೆಗೆ ಕ್ಯಾರೇ ಎನ್ನದಿದ್ದಾಗ, ಅವ್ರಿಗೆ ಅರಣ್ಯ ಇಲಾಖೆಯ ಅನುಮತಿ ಪತ್ರವನ್ನು ನೀಡದೇ ಸತಾಯಿಸಿದ್ದರು. ಹೀಗಾಗಿ, ಕೊನೆಗೆ ಮೊದಲನೇ ಆರೋಪಿ DyRFO ಬಸವರಾಜ್ ಯಾದವಾಡ ಸಾಹೇಬ್ರು, ಎರಡನೇ ಆರೋಪಿ ನಾಸಿರ್ ನನ್ನು ದೂರುದಾರ ರಮೇಶನ ಮನೆಗೆ ಕಳಿಸಿ 10 ಸಾವಿರ ಬೇಡ ಜಸ್ಟ್ 8 ಸಾವಿರ ಕೊಡಿ ಅಂತಾ ಸುಲಿಗೆಗೆ ನಿಂತಿದ್ರು ಅಂತಾ ದೂರುದಾರ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರೋ ಲೋಕಾಯುಕ್ತ ಪೊಲೀಸರು ಸೋಮವಾರ ಮುಂಡಗೋಡಿನ ಅರಣ್ಯ ಇಲಾಖೆ ಕಛೇರಿಗೆ ಬಂದು ಆರೋಪಿಗಳಿಗೆ ನೋಟೀಸು ನೀಡಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಇನ್ನು ಜಬರ್ದಸ್ಥ ತನಿಖೆಯ ಅವಶ್ಯಕತೆ ಇದ್ದು ಬ್ರಷ್ಟ ಅಧಿಕಾರಿಗಳ ಹೆಡಮುರಿ ಕಟ್ಟಬೇಕಿದೆ. ಅಂದಾಗ ಮಾತ್ರ ಮುಂಡಗೋಡಿನ ವನದೇವಿ ಒಂದಿಷ್ಟು ನಿಟ್ಟುಸಿರು ಬಿಡಬಹುದೆನೊ..? ಏನಂತಿರಿ..?