ಮುಂಡಗೋಡ ತಾಲೂಕಿನ ಹಲವೆಡೆ ಭಾರೀ ಮಳೆಯಾಗಿದೆ. ಭಾರೀ ಮಳೆಗಾಳಿಗೆ ಹಲವು ಅವಾಂತರಗಳು ಸೃಷ್ಟಿಯಾಗಿವೆ. ತಾಲೂಕಿನ ಹುನಗುಂದದಲ್ಲಿ ಭಾರೀ ಮಳೆಗಾಳಿಗೆ ಮನೆಯ ಮೇಲ್ಚಾವಣಿಗಳು ಹಾರಿಹೋಗಿವೆ. ಹಲವು ಕಡೆ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಮರಗಳು ನೆಲಕ್ಕುರುಳಿವೆ. ಹೀಗಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಹುನಗುಂದ ಗ್ರಾಮದ ದೇಶಪಾಂಡೆನಗರದಲ್ಲಿ ಬಸವ್ವ ಮನಗೂಳಿ ಎಂಬುವವರ ಮನೆಯ ಹಿಂದಿನ ಮೇಲ್ಚಾವಣಿ ಹಾರಿ ಮನೆಯ ಮುಂದಿನ ರಸ್ತೆಗೆ ಬಂದು ಬಿದ್ದಿದೆ. ಮನೆಯಲ್ಲೇ ಪುಟ್ಟ ಪುಟ್ಟ ಮಕ್ಕಳೊಂದಿಗೆ ಇದ್ದ ಸಂದರ್ಭದಲ್ಲೇ ಇಂತಹ ಘಟನೆ ನಡೆದಿದ್ದು ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ. ಬದಲಾಗಿ, ಇಡೀ ಕುಟುಂಬ ರಾತ್ರಿಯಿಡಿ ಎಲ್ಲಿ ವಾಸಮಾಡುವುದು ಅನ್ನೋ ಚಿಂತೆಯಲ್ಲಿದೆ. ಮೇಲ್ಚಾವಣಿ ಹಾರಿಹೋದ ಹಿನ್ನೆಲೆಯಲ್ಲಿ, ಮನೆಯ ಒಳಗಡೆ ಮಳೆಯ ನೀರು ತುಂಬಿಕೊಂಡಿದ್ದು, ಕೆಸರುಮಯವಾಗಿದೆ. ಹೀಗಾಗಿ, ಮನೆಯ ಒಳಗಡೆ ವಾಸಮಾಡಲು ಸಾಧ್ಯವಿಲ್ಲದ ಸ್ಥಿತಿ ಇದೆ.

ನೆಲಕ್ಕುರುಳಿದ ವಿದ್ಯುತ್ ಕಂಬಗಳು..!
ಇನ್ನು ಇದೇ ಗ್ರಾಮದ ವಿರಕ್ತಮಠದ ಹತ್ತಿರ ಮರವೊಂದು ಬುಡಸಮೇತ ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ನಾಲ್ಕೈದು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಅಲ್ದೇ ರಸ್ತೆಯ ಮೇಲೆಯೇ ಮರ ಬಿದ್ದಿರುವುದರಿಂದ ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ.