ಮುಂಡಗೋಡಲ್ಲಿ ಕಾಡುಹಂದಿ ಮಾಂಸ ಸಿಕ್ಕಿದ್ದು ನಿಜವಂತೆ, RFO ಸಾಹೇಬ್ರು ಕೊಟ್ರು ಅಸಲೀ ಮಾಹಿತಿ..! ಅಷ್ಟಕ್ಕೂ ಆರೆಸ್ಟ್ ಆದವನು ಯಾರು..? ಪರಾರಿ ಯಾರು..?

​ಮುಂಡಗೋಡ ಇಲ್ಲಿನ ಗಾಂಧಿನಗರದ ಬಾಡಿಗೆ ಮನೆಯಲ್ಲಿ ಕಾಡುಹಂದಿ ಮಾಂಸ ಸಂಗ್ರಹಿಸಿ, ವಿಭಾಗಿಸಿ ಅಡುಗೆ ಸಿದ್ಧಪಡಿಸುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಪರಿಣಾಮ, 35 ಕೆ.ಜಿ ಕಾಡುಹಂದಿ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಹಾಗಂತ, ಮುಂಡಗೋಡ RFO ಅಪ್ಪಾರಾವ್ ಕಲಶೆಟ್ಟಿ ಮಾಹಿತಿ ನೀಡಿದ್ದಾರೆ.

ಓರ್ವ ಆರೆಸ್ಟ್, ಮತ್ತೋರ್ವ ಪರಾರಿ..!
ಅಸಲು, ಹಂದಿ ಮಾಂಸದ ಸವಿ ಸವಿಯಲು ಸಜ್ಜಾಗಿದ್ದ ​ಬೆಂಗಳೂರಿನ ಹೆಸರಘಟ್ಟ ನಿವಾಸಿ ಪ್ರಜ್ವಲ್ (36) ಬಂಧಿತ ಆರೋಪಿಯಾಗಿದ್ದಾನೆ. ಮುಂಡಗೋಡದ ಗಾಂಧಿನಗರದ ಸುರೇಶ ತಿಮ್ಮಣ್ಣ ಕೊರವರ (42) ಕಾರ್ಯಾಚರಣೆಯ ವೇಳೆ ಸ್ಥಳದಿಂದ ಪರಾರಿಯಾಗಿದ್ದು, ಆತನ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.

RFO ಅಪ್ಪಾರಾವ್ ಕಲಶೆಟ್ಟಿ

​ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅಡಿಯಲ್ಲಿ ಅರಣ್ಯ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು, ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ACF ಈರೇಶ್ ಕಬ್ಬಿನ್

​ಯಲ್ಲಾಪುರ ವಿಭಾಗದ DFO ಅಬ್ದುಲ್ ಅಜೀಜ್ ಶೇಖ್ ಎ. ಹಾಗೂ ಮುಂಡಗೋಡ ಉಪ ವಿಭಾಗದ ACF ಈರೇಶ ಕಬ್ಬಿನ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಮುಂಡಗೋಡ RFO ಅಪ್ಪಾರಾವ ಕಲಶೆಟ್ಟಿ, DyRFO ಗಳಾದ ಅರ್ಜುನ ಮೊರಬ, ಕು. ಸುನಿತಾ ಬಿ.ಎಂ., ಗಸ್ತು ಅರಣ್ಯ ಪಾಲಕರಾದ ಮುಸ್ತಾಕ ಅಲಿ ಒಂಟಿ, ಮುತ್ತುರಾಜ ಹಳ್ಳಿ, ಸಂತೋಷ ಜಲ್ಲೇರ, ರಾಘವೇಂದ್ರ ಅಮ್ಮಿನಬಾವಿ ಹಾಗೂ ಇತರ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು ಎಂದು ಮುಂಡಗೋಡ RFO ಪ್ರಕಟಣೆಯಲ್ಲಿ ತಿಳಿಸಿದ್ದಾರೆ.