ಪಬ್ಲಿಕ್ ಫಸ್ಟ್ ನ್ಯೂಸ್ ಇಂಪ್ಯಾಕ್ಟ್: ಎಚ್ಚೆತ್ತ ಉತ್ತರ ಕನ್ನಡ ಪೊಲೀಸ್ ಇಲಾಖೆ; ಒಂಟಿ ವೃದ್ಧರ ಮನೆಗಳಿಗೆ ಬೀಟ್ ಪೊಲೀಸರ ಭೇಟಿ, ‘ಆಸರೆ’ ಯೋಜನೆ ಚುರುಕು..!

ಮುಂಡಗೋಡ: ಪಬ್ಲಿಕ್ ಫಸ್ಟ್ ನ್ಯೂಸ್ ಬಿತ್ತರಿಸಿದ ವಿಸ್ತೃತ ವರದಿಗೆ ಭರ್ಜರಿ ಫಲಶೃತಿ ಸಿಕ್ಕಿದೆ. ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾದ್ಯಂತ ‘ಆಸರೆ’ ಯೋಜನೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತಂದಿದೆ.

ಅವೆರಡು ಮರ್ಡರ್..!
​ಮುಂಡಗೋಡ ತಾಲೂಕಿನ ಮಳಗಿ ಭಾಗದಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಒಂಟಿ ಮಹಿಳೆಯರ ಮೇಲೆ ನಡೆದ ಎರಡೆರಡು ಭೀಕರ ಹತ್ಯೆ ಪ್ರಕರಣಗಳು ಜಿಲ್ಲೆಯ ಜನರನ್ನು ಬೆಚ್ಚಿಬೀಳಿಸಿದ್ದವು. ಮಳಗಿ ಹಾಗೂ ಆಲಳ್ಳಿಯಲ್ಲಿ ಚಿನ್ನದ ಆಸೆಗಾಗಿ ಸ್ಥಳೀಯ ಹಂತಕರಿಂದಲೇ ಒಂಟಿ ಮಹಿಳೆಯರ ಬರ್ಬರ ಹತ್ಯೆಯಾಗಿತ್ತು. ಒಂಟಿ ವೃದ್ಧರು ಮತ್ತು ಮಹಿಳೆಯರ ರಕ್ಷಣೆಗಾಗಿ ಪೊಲೀಸ್ ಇಲಾಖೆಯಲ್ಲಿ ‘ಆಸರೆ’ ಯೋಜನೆ ಜಾರಿಯಲ್ಲಿದ್ದರೂ, ಅದರ ಸಮರ್ಪಕ ಪಾಲನೆಯಾಗದೆ ನಿರ್ಲಕ್ಷ್ಯ ವಹಿಸಲಾಗಿತ್ತು.

ವಿಸ್ತ್ರತ ವರದಿ..!
​ಈ ಗಂಭೀರ ವಿಚಾರದ ಕುರಿತು ‘ಪಬ್ಲಿಕ್ ಫಸ್ಟ್ ನ್ಯೂಸ್’ ವಿಸ್ತೃತ ವರದಿಯನ್ನು ಪ್ರಸಾರ ಮಾಡಿ, ಪೊಲೀಸ್ ಇಲಾಖೆಯ ಗಮನ ಸೆಳೆದಿತ್ತು. ವರದಿ ಪ್ರಸಾರವಾದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ದೀಪನ್ ಎಂ.ಎನ್. ಅವರು, ಜಿಲ್ಲೆಯ ಎಲ್ಲಾ ಠಾಣೆಗಳ ಅಧಿಕಾರಿಗಳಿಗೆ ‘ಆಸರೆ’ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ.

​ಬೀಟ್ ಪೊಲೀಸರಿಂದ ಅಭಯ..!
ಎಸ್ಪಿ ಅವರ ಖಡಕ್ ಆದೇಶದ ಹಿನ್ನೆಲೆಯಲ್ಲಿ, ಜಿಲ್ಲಾದ್ಯಂತ ಬೀಟ್ ಪೊಲೀಸರು ಅಲರ್ಟ್ ಆಗಿದ್ದಾರೆ. ತಮ್ಮ ವ್ಯಾಪ್ತಿಯಲ್ಲಿರುವ ಒಂಟಿ ವೃದ್ಧರು ಹಾಗೂ ಒಂಟಿ ಮಹಿಳೆಯರ ಮನೆಗಳಿಗೆ ಖುದ್ದು ಭೇಟಿ ನೀಡುತ್ತಿರುವ ಪೊಲೀಸರು, ಅವರ ಯೋಗಕ್ಷೇಮ ವಿಚಾರಿಸಿ ಧೈರ್ಯ ಹಾಗೂ ಅಭಯ ನೀಡುತ್ತಿದ್ದಾರೆ. ಅಲ್ಲದೆ, ತುರ್ತು ಸಂದರ್ಭಗಳಲ್ಲಿ ಸಂಪರ್ಕಿಸಲು ಪೊಲೀಸ್ ಸಹಾಯವಾಣಿ ಸಂಖ್ಯೆಗಳನ್ನು ನೀಡಿ ಸುರಕ್ಷತೆಯ ಭರವಸೆ ಮೂಡಿಸುತ್ತಿದ್ದಾರೆ.

​ಸಾಮಾಜಿಕ ಕಳಕಳಿಯೊಂದಿಗೆ ವರದಿ ಪ್ರಸಾರ ಮಾಡಿ, ಒಂಟಿ ಜೀವಗಳಿಗೆ ರಕ್ಷಣೆ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ‘ಪಬ್ಲಿಕ್ ಫಸ್ಟ್ ನ್ಯೂಸ್’ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.