ಬಾಚಣಕಿಯ ಕಾಡ ನಡುವೆ ಸಿಕ್ಕ ರುಂಡವಿಲ್ಲದ ಹೆಣ ಯಾರದ್ದು..! ಅಷ್ಟಕ್ಕೂ ಇದು ಆತ್ಮಹತ್ಯೆಯೋ, ಕೊಲೆಯೋ..?

ಮುಂಡಗೋಡ ತಾಲೂಕಿನ ಬಾಚಣಕಿಯಲ್ಲಿ ರುಂಡವಿಲ್ಲದ ಅನಾಥ ಶವವೊಂದು ಕಾಡಿನ ನಡುವೆ ನಿರ್ಜನ ಪ್ರದೇಶದಲ್ಲಿ ಸಿಕ್ಕಿದೆ. ಈ ಶವ ಎರಡು ತಿಂಗಳ ಹಿಂದೆ ನಾಪತ್ತೆಯಾಗಿದ್ದವನ ಶವ ಅನ್ನೋದು ಬಹುತೇಕ ಕನ್ಫರ್ಮ್ ಆಗ್ತಿದೆ..? ಅಷ್ಟಕ್ಕೂ ಈ ಸಾವು ಹೇಗಾಯ್ತು..? ಇದು ಆತ್ಮಹತ್ಯೆಯಾ..? ಅಥವಾ ಮರ್ಡರ್ರಾ..? ಇಂತಹದ್ದೊಂದು ಪ್ರಶ್ನೆ ಸದ್ಯ ಪೊಲೀಸ್ರಿಗೆ ತಲೆ ಹೊಕ್ಕಿದೆ. ಕುಟುಂಬಸ್ಥರೂ ಇಂತದ್ದೇ ಅನುಮಾನದಲ್ಲಿ ಕಣ್ಣೀರು ಹಾಕ್ತಿದಾರೆ.

ಆತನ ಹೆಸ್ರು ಅಂದಾನೆಪ್ಪ..!
ಅಂದಹಾಗೆ, ಆತನ ಹೆಸ್ರು ಅಂದಾನೆಪ್ಪ ಯಲ್ಲಪ್ಪ ಕುಸೂರ, ಈಗಷ್ಟೆ ಆತನ ವಯಸ್ಸು 50 ರ ಆಸುಪಾಸು. ಆತ ಕಳೆದ ಸೆಬ್ಟೆಂಬರ್ 19 ರಂದೇ ಮನೆಯಿಂದ ನಾಪತ್ತೆಯಾದವನು ತಿರುಗಿ ಬಂದೇ ಇಲ್ಲ ಅಂತಾ ಕುಟುಂಬಸ್ಥರು, ಮಾರನೇ ದಿನವೇ ಮುಂಡಗೋಡ ಪೊಲೀಸ್ ಠಾಣೆಗೆ ದೂರು ನೀಡಿದ್ದರು‌. ಈಗ ಬಾಚಣಕಿ ಸಮೀಪದ ಕಾಡಲ್ಲಿ ಹೆಣ ಪತ್ತೆಯಾಗಿದ್ದು, ಅದು ಅಂದಾನೆಪ್ಪನದ್ದೇ ಅನ್ನೋದು ಕನ್ಫರ್ಮ್ ಆಗಿದೆ. ಯಾಕಂದ್ರೆ ಕುಟುಂಬಸ್ಥರು ಹೆಣ ಅಂದಾನೆಪ್ಪನದ್ದೇ ಅಂತಾ ಗುರ್ತು ಹಿಡಿದಿದ್ದಾರೆ.

ಏಕಾಂಗಿ ಜೀವ..!
ಅಸಲು, ಬಾಚಣಕಿಯಲ್ಲಿ ಏಕಾಂಗಿಯಾಗಿಯೇ ಬದುಕುತ್ತಿದ್ದ ಅಂದಾನೆಪ್ಪ, ತನ್ನ ಅಣ್ಣನ ಮನೆಯಲ್ಲೇ ಊಟೋಪಚಾರ ಮಾಡಿಕೊಂಡು, ರಾತ್ರಿ ತನ್ನ ಮನೆಯಲ್ಲಿ ಮಲಗುತ್ತಿದ್ದ. ಹೀಗಿರುವಾಗ ಸೆಪ್ಟೆಂಬರ್ 19 ರಂದು, ಎಂದಿನಂತೆ ರಾತ್ರಿ ಊಟ ಮಾಡಿ ತನ್ನ ಮನೆಗೆ ಮಲಗಲು ಹೋಗಿದ್ದ ಅಂದಾನೆಪ್ಪ ಬೆಳಗಾಗುವಷ್ಟರಲ್ಲೇ ನಾಪತ್ತೆಯಾಗಿದ್ದ. ಆತನ ಮೊಬೈಲ್ ಮಾತ್ರ ಅಲ್ಲೇ ಇತ್ತು.

ಕಾಡ ನಡುವೆ ಸಿಕ್ಕ ಹೆಣ..!
ಅಂದಹಾಗೆ, ಇವತ್ತು ಅಂದ್ರೆ ಗುರುವಾರ, ಬೆಳಿಗ್ಗೆ ಕುರಿಗಾಯಿಯೊಬ್ಬರಿಗೆ, ರುಂಡವಿಲ್ಲದ ಶವದ ಅಸ್ತಿಪಂಚರ ಕಂಡಿದೆ. ತಕ್ಷಣವೇ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾನೆ. ಹೀಗಾಗಿ, ಪೊಲೀಸ್ರಿಗೆ ಮಾಹಿತಿ ತಿಳಿದಿದೆ. ಮುಂಡಗೋಡ ಪಿಐ ರಮೇಶ ಹನಾಪುರ ಸೇರಿದಂತೆ ಪೊಲೀಸ್ರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಆತ್ಮಹತ್ಯೆಯೋ..? ಕೊಲೆಯೋ..?
ಬಾಚಣಕಿ ಗ್ರಾಮದ ತನ್ನದೇ ಸ್ವಂತ ಮನೆಯಲ್ಲಿ ಬದುಕುತ್ತಿದ್ದ ಅಂದಾನೆಪ್ಪ ತನ್ನ ಪತ್ನಿಯೊಂದಿಗೆ ಮುನಿಸಿಕೊಂಡು ಎಕಾಂಗಿಯಾಗಿದ್ದ‌. ಹೀಗಾಗಿ, ಹೆಂಡತಿ ಹಾಗೂ ಈತನ ನಡುವೆ ವ್ಯಾಜ್ಯ ನಡೆದಿತ್ತು. ಸದ್ಯ ಪ್ರಕರಣ ಕೋರ್ಟನಲ್ಲಿದೆ‌. ಹೀಗಾಗಿ, ಈತ ಹಲವು ವರ್ಷಗಳಿಂದ ತನ್ನ ಅಣ್ಣನ ಮನೆಯಲ್ಲೇ ಊಟ ಮಾಡಿ ತನ್ನ ಮನೆಯಲ್ಲಿ ದನಕರುಗಳನ್ನು ಸಾಕಿಕೊಂಡು ಜೀವನ ನಡೆಸಿದ್ದ. ಆದ್ರೆ, ಕಳೆದ ಸೆಪ್ಟೆಂಬರ್ 19 ರ ರಾತ್ರಿ ಎಂದಿನಂತೆ ಊಟ ಮಾಡಿ ಮನೆಗೆ ತೆರಳಿದ್ದವ ಬೆಳಗಾಗುವಷ್ಟರಲ್ಲೇ ನಾಪತ್ತೆಯಾಗಿದ್ದ‌.

ಆತ್ಮಹತ್ಯೆನಾ..?
ಅಸಲು, ಗ್ರಾಮಸ್ಥರು ಹೇಳೊ ಪ್ರಕಾರ ಆತ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಂತೂ ಆಗಿರಲಿಲ್ಲವಂತೆ. ಅಷ್ಟಕ್ಕೂ, ಹಾಗೊಂದು ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಿದ್ದರೆ, ತನ್ನ ಮನೆಯಲ್ಲಿ ಏಕಾಂಗಿಯಾಗಿದ್ದವ ಅಲ್ಲೇ ಸಾವು ಕಾಣಬಹುದಿತ್ತು. ಆದ್ರೆ, ಅಷ್ಟು ರಾತ್ರಿಯಲ್ಲಿ ಏನಿಲ್ಲವೆಂದರೂ 4 ಕಿಮೀ ದೂರ ಬಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾನಾ..? ಅಲ್ದೆ, ಸದ್ಯ ಸಿಕ್ಕಿರುವ ರುಂಡವಿಲ್ಲದ ಶವದ ಪಕ್ಕ ವಿಷದ ಬಾಟಲಿ ಹಾಗೂ ಮದ್ಯದ ಎರಡು ಪೌಚುಗಳು ಸಿಕ್ಕಿವೆ. ವಿಪರ್ಯಾಸ ಅಂದ್ರೆ ಸದ್ಯ ಶವವಾಗಿ ಸಿಕ್ಕಿರೋ ಅಂದಾನೆಪ್ಪ ಕುಡುಕನೇ ಅಲ್ಲವಂತೆ. ಕುಡುಕರನ್ನ ಕಂಡ್ರೂ ಮಾರುದ್ಧ ಹಾಯುವ ಆತನ ಶವದ ಪಕ್ಕದಲ್ಲಿ ಮದ್ಯದ ಪೌಚು ಸಿಕ್ಕಿದೆ ಅಂದ್ರೆ ಏನರ್ಥ..? ಈ ಪ್ರಶ್ನೆ ಸದ್ಯ ಗ್ರಾಮಸ್ಥರಿಗೆ ಕಾಡ್ತಿದೆ. ಹಾಗಿದ್ರೆ ಇದೊಂದು ವ್ಯವಸ್ಥಿತವಾಗಿ ನಡೆದ ಹತ್ಯೆಯಾ..? ಯಾರಂದ್ರೆ ಯಾರಿಗೂ ಅರ್ಥವಾಗ್ತಿಲ್ಲ.

ಪೊಲೀಸ್ರ ತನಿಖೆ..!
ಶವ ಅಂದಾನಪ್ಪನದ್ದೇ ಅಂತಾ ಮಾಹಿತಿ ತಿಳಿದ ಪೊಲೀಸ್ರು ಸದ್ಯ ತನಿಖೆಗಿಳಿದಿದ್ದಾರೆ‌. ಸಾವು ಹೇಗಾಯ್ತು..? ದಟ್ಟ ಕಾಡಿನ ನಡುವೆ ನಿರ್ಜನ ಪ್ರದೇಶಕ್ಕೇ ಬಂದು ಆ ವ್ಯಕ್ತಿ ಹೆಣವಾಗಿರೋದರ ಹಿಂದಿನ ಅಸಲೀಯತ್ತಾದ್ರೂ ಏನು..? ಯಾವ ಕಾರಣಕ್ಕಾಗಿ ಸಾವು ಸಂಭವಿಸಿದೆ..? ಇದೇನು ಆತ್ಮಹತ್ಯೆಯಾ..? ಅಥವಾ ಕೊಲೆಯಾ..?ಇದೇಲ್ಲ ಪೊಲೀಸ್ರ ತನಿಖೆ ನಂತರವಷ್ಟೇ ಬಯಲಿಗೆ ಬರಬೇಕಿದೆ.