ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯ ಮತ್ತಿಬ್ಬರನ್ನು ಉತ್ತರ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ಮಂಜು ಅರ್ಜುನ ನವಲೆ ಹಾಗೂ ಮಧುಸಿಂಗ್ ರಜಪೂತ್ ಎಂಬುವವರನ್ನು ಉತ್ತರ ಕನ್ನಡ ಎಸ್ಪಿ ದೀಪನ್ ಎಂ.ಎನ್. ಬರೋಬ್ಬರಿ 6 ತಿಂಗಳುಗಳ ಕಾಲ ಜಿಲ್ಲೆಯಿಂದ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.

ಗಡಿಪಾರು ನಂಬರ್ 1. ಮಂಜು ನವಲೆ..!
ಸಾರ್ವಜನಿಕ ಶಾಂತಿ, ನೆಮ್ಮದಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದ ಆರೋಪದಡಿ, ಮುಂಡಗೋಡಿನ ಗಾಂಧಿನಗರದ ನಿವಾಸಿ ಮಂಜು ಅರ್ಜುನ ನವಲೆ(30) ಎಂಬಾತನನ್ನು ಉತ್ತರ ಕನ್ನಡ ಜಿಲ್ಲೆಯಿಂದ ಕೆ.ಜಿ.ಎಫ್ ಜಿಲ್ಲೆಗೆ 6 ತಿಂಗಳ ಅವಧಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.

ಮಂಜು ನವಲೆ ವಿರುದ್ಧ ಇದ್ದ ಕೇಸ್ ಗಳು..!
ವೃತ್ತಿಯಿಂದ ಡ್ರೈವರ್ ಆಗಿರುವ ಮಂಜು ನವಲೆ ವಿರುದ್ಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಹಲವು ಗಂಭೀರ ಪ್ರಕರಣಗಳು ದಾಖಲಾಗಿದ್ದು ಅದನ್ನೇಲ್ಲ ಗಮನಿಸಿ ಸದ್ಯ ಗಡಿಪಾರಿಗೆ ಆದೇಶಿಸಲಾಗಿದೆ. ಈತನ ಮೇಲಿದ್ದ ಪ್ರಕರಣಗಳು ಈ ಕೆಳಗಿನಂತಿವೆ.
1. 2019 ರಲ್ಲಿ: ಕಲಂ 395, 397, 201 ಐ.ಪಿ.ಸಿ ಅಡಿಯಲ್ಲಿ ಪ್ರಕರಣ (ಗುನ್ನಾ ನಂ: 10/2019)
2. 2024 ರಲ್ಲಿ: ಬಿ.ಎನ್.ಎಸ್ ಅಡಿಯಲ್ಲಿ ಪ್ರಕರಣ (ಗುನ್ನಾ ನಂ: 130/2024) ಹಾಗೂ ಕರ್ನಾಟಕ ಮೀಟರ್ ಬಡ್ಡಿ ನಿಷೇಧ ಕಾಯ್ದೆ-2004 ರ ಅಡಿಯಲ್ಲಿ ಪ್ರಕರಣ (ಗುನ್ನಾ ನಂ: 182/2024)
3. 2025 ರಲ್ಲಿ: ವಿವಿಧ ಬಿ.ಎನ್.ಎಸ್ ಕಲಂ ಅಡಿಯಲ್ಲಿ ಮತ್ತೊಂದು ಪ್ರಕರಣ (ಗುನ್ನಾ ನಂ: 34/2025)

ಗಡಿಪಾರು ಆದೇಶಕ್ಕೆ ಕಾರಣ..?
ಆರೋಪಿಯು ತನ್ನ ಅಪರಾಧ ಹಿನ್ನೆಲೆಯನ್ನು ಬಂಡವಾಳವಾಗಿಸಿಕೊಂಡು ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುತ್ತಿದ್ದ ಆರೋಪ ಹಾಗೂ ಸಾರ್ವಜನಿಕ ಶಾಂತಿ, ಸೌಹಾರ್ದಕ್ಕೆ ಆಸ್ತಿಪಾಸ್ತಿ ಮತ್ತು ಕಾನೂನು ಸುವ್ಯವಸ್ಥೆಗೆ ಈತನಿಂದ ಧಕ್ಕೆ ಉಂಟಾಗುವ ಸಾಧ್ಯತೆಗಳಿರುವುದರಿಂದ, ಮುಂಡಗೋಡ ಪೊಲೀಸ್ ಇನ್ಸ್‌ಪೆಕ್ಟರ್ ಅವರು ಈತನ ವಿರುದ್ಧ ಗಡಿಪಾರು ಪ್ರಸ್ತಾವನೆಯನ್ನು ಸಲ್ಲಿಸಿದ್ದರು.

ತಕ್ಷಣದಿಂದ ಜಾರಿ..!
ಹೀಗಾಗಿ, ಉತ್ತರ ಕನ್ನಡ ಎಸ್ಪಿ ದೀಪನ್ ಎಂ.ಎನ್, ಪ್ರಕರಣದ ಸಮಗ್ರ ಪರಿಶೀಲನೆ ನಡೆಸಿ, ಜೂನ್ 27 ರಂದು ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 55(ಎ)&(ಬಿ) ರಡಿಯಲ್ಲಿ ಈ ಗಡಿಪಾರು ಆದೇಶವನ್ನು ಹೊರಡಿಸಿದ್ದಾರೆ. ಆದೇಶದನ್ವಯ, ಪ್ರತಿವಾದಿ ಮಂಜು ನವಲೆಯನ್ನು ಉತ್ತರ ಕನ್ನಡ ಜಿಲ್ಲೆಯಿಂದ ಕೆ.ಜಿ.ಎಫ್ ಜಿಲ್ಲೆಯ ರಾಬರ್ಟ್‌ಸನ್ ಪೊಲೀಸ್ ಠಾಣಾ ವ್ಯಾಪ್ತಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಬರೋಬ್ಬರಿ 6 ತಿಂಗಳವರೆಗೆ ಗಡಿಪಾರು ಮಾಡಲಾಗಿದೆ.

ಗಡಿಪಾರು ನಂಬರ್ 2, ಮಧುಸಿಂಗ್..!
ಇನ್ನು ಅದ್ರಂತೆ, ತಾಲೂಕಿನ ಬಸಾಪುರ ಗ್ರಾಮದ ಮಧುಸಿಂಗ್ ರಜಪೂತ್ (31) ಎಂಬಾತನನ್ನೂ ಕೂಡ, ಉತ್ತರ ಕನ್ನಡ ಜಿಲ್ಲೆಯಿಂದ ಮಂಡ್ಯ ಜಿಲ್ಲೆಗೆ 6 ತಿಂಗಳ ಅವಧಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.

ಮಧುಸಿಂಗ್ ವಿರುದ್ಧ ಇದ್ದ ಕೇಸ್ ಗಳು..!
ವೃತ್ತಿಯಿಂದ ಮೊಬೈಲ್ ರಿಪೇರಿ ಕೆಲಸ ಮಾಡುತ್ತಿದ್ದ ಮಧುಸಿಂಗ್ ರಜಪೂತ್ ವಿರುದ್ಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಹಲವು ಗಂಭೀರ ಪ್ರಕರಣಗಳು ದಾಖಲಾಗಿದ್ದು ಅದನ್ನೇಲ್ಲ ಗಮನಿಸಿ ಸದ್ಯ ಗಡಿಪಾರಿಗೆ ಆದೇಶಿಸಲಾಗಿದೆ. ಈತನ ಮೇಲಿದ್ದ ಪ್ರಕರಣಗಳು ಈ ಕೆಳಗಿನಂತಿವೆ.
1. 2019 ರಲ್ಲಿ: ಕಲಂ 395, 397, 201 ಐ.ಪಿ.ಸಿ ಅಡಿಯಲ್ಲಿ ಪ್ರಕರಣ (ಗುನ್ನಾ ನಂ: 10/2019).
2. 2025 ರಲ್ಲಿ: ವಿವಿಧ ಬಿ.ಎನ್.ಎಸ್-2023 ರ ಕಲಂ ಅಡಿಯಲ್ಲಿ ಪ್ರಕರಣ (ಗುನ್ನಾ ನಂ: 34/2025)
ಹೀಗಾಗಿ, ಮಧುಸಿಂಗ್ ರಜಪೂತ್ ವಿರುದ್ಧ ತನ್ನ ಅಪರಾಧ ಹಿನ್ನೆಲೆಯನ್ನು ಬಂಡವಾಳವಾಗಿಸಿಕೊಂಡು ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದ್ದ ಆರೋಪ, ಹಾಗೂ ಇದರಿಂದ ಸಾರ್ವಜನಿಕ ಸುರಕ್ಷತೆಗೆ ಅಪಾಯ ಉಂಟಾಗುತ್ತಿರುವುದಲ್ಲದೆ, ಸಾರ್ವಜನಿಕ ಶಾಂತಿ, ಸೌಹಾರ್ದ, ಆಸ್ತಿಪಾಸ್ತಿ ಮತ್ತು ಕಾನೂನು ಸುವ್ಯವಸ್ಥೆಗೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಕಂಡುಬಂದ ಹಿನ್ನೆಲೆಯಲ್ಲಿ, ಮುಂಡಗೋಡ ಪೊಲೀಸ್ ಠಾಣೆಯ ಪಿಐ, ಆರೋಪಿಯ ವಿರುದ್ಧ ಗಡಿಪಾರು ಮಾಡುವಂತೆ ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸಿದ್ದರು.

ಮಂಡ್ಯ ಜಿಲ್ಲೆಗೆ ಗಡಿಪಾರು..!
ಹೀಗಾಗಿ, ಉತ್ತರ ಕನ್ನಡ ಎಸ್ಪಿ ದೀಪನ್ ಎಂ.ಎನ್, ಪ್ರಕರಣದ ಸಮಗ್ರ ಪರಿಶೀಲನೆ ನಡೆಸಿ, ಜೂನ್ 27 ರಂದು ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 55(ಎ)&(ಬಿ) ರಡಿಯಲ್ಲಿ ಈ ಗಡಿಪಾರು ಆದೇಶವನ್ನು ಹೊರಡಿಸಿದ್ದಾರೆ. ಆದೇಶದನ್ವಯ, ಪ್ರತಿವಾದಿ ಮಧುಸಿಂಗ್ ರಜಪೂತ್ ನನ್ನು ಉತ್ತರ ಕನ್ನಡ ಜಿಲ್ಲೆಯಿಂದ ಮಂಡ್ಯ ಜಿಲ್ಲೆಯ ಮಂಡ್ಯ ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ತಕ್ಷಣದಿಂದ ಜಾರಿಗೆ ಬರುವಂತೆ 6 ತಿಂಗಳವರೆಗೆ ಗಡಿಪಾರು ಮಾಡಲಾಗಿದೆ.
