ಮುಂಡಗೋಡ ಹೆಸ್ಕಾಂ ನಿರ್ಲಕ್ಷಕ್ಕೆ ಯುವಕ ಬಲಿ..? ದೇವರಿಗಂತ ಹೂವು ಕೀಳಲು ಹೋದ ಪೂಜಾರಿ ಹೆಣವಾದ..! ಶಾಲಾ ಆವರಣದ ಬೇಲಿಯಲ್ಲೇ ವಿದ್ಯುತ್..!

ಮುಂಡಗೋಡ ತಾಲೂಕಿನ ಜೋಗೀಶ್ವರ ಹಳ್ಳ ಗೌಳಿದಡ್ಡಿಯಲ್ಲಿ ಮುಂಡಗೋಡ ಹೆಸ್ಕಾಂ ನಿರ್ಲಕ್ಷಕ್ಕೆ ಯುವಕ ಬಲಿಯಾದ್ನಾ..? ಅನ್ನೋ ಪ್ರಶ್ನೆ ಮೂಡಿದೆ. ಹೂವು ಕೀಳಲು ಶಾಲಾ ಆವರಣಕ್ಕೆ ಹೋದವನು ಹೆಣವಾಗಿದ್ದಾನೆ. ಕಿರಿಯ ಪ್ರಾಥಮಿಕ ಶಾಲೆಯ ತಂತಿ ಬೇಲಿ ತಗುಲಿದ ಪರಿಣಾಮ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಅಂತಾ ಗ್ರಾಮಸ್ಥರು ಹೇಳ್ತಿದಾರೆ. ಅರ್ಥಾತ್‌, ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲೇ ಘಟನೆ ನಡೆದಿದ್ದು ಭಾರೀ ಆತಂಕಕ್ಕೆ ಕಾರಣವಾಗಿದೆ.

ಜೋಗೇಶ್ವರ ಹಳ್ಳ ಗೌಳಿ ದಡ್ಡಿಯ ಈಶ್ವರ ದೇವಸ್ಥಾನದ ಪೂಜಾರಿ, ಜಾನು ಸಾವು ಕೋಕರೆ (26) ಎಂಬುವವನೇ ದುರಂತ ಅಂತ್ಯ ಕಂಡಿದ್ದು, ಈತನ ಸಾವು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಶಾಲಾ ಆವರಣದಲ್ಲೇ ಘಟನೆ..!
ಅಸಲು, ಈ ಗೌಳಿದಡ್ಡಿಯಲ್ಲಿ ಕಿರಿಯ ಪ್ರಾಥಮಿಕ ಶಾಲೆ ಇದೆ, ಜೊತೆಗೆ ಅದರ ಪಕ್ಕದಲ್ಲೇ ಅಂಗನವಾಡಿಯೂ ಇದೆ. ನಾಳೆ ಸೋಮವಾರ ಹುಣ್ಣಿಮೆ ಇರೋ ಕಾರಣಕ್ಕೆ ದೇವರ ಪೂಜೆಗೆ ಅಂತಾ ಹೂವು ಕೀಳಲು ಹೋಗಿದ್ದ ಯುವಕ. ತಂತಿ ಬೇಲಿಯ ಮೇಲೆ ಪೊಗದಸ್ತಾಗಿ ಅರಳಿ ನಿಂತಿದ್ದ ಹೂವುಗಳನ್ನು ಕೀಳಲು ಕೈ ಹಾಕಿದ್ದ ಅಷ್ಟೆ, ತಕ್ಷಣವೇ ಬೇಲಿಯಿಂದ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವು ಕಂಡಿದ್ದಾನೆ.

ಬೇಲಿಗೆ ತಾಗಿಯೇ ಟ್ರಾನ್ಸಫಾರ್ಮರ್..!
ನಿಜ ಅಂದ್ರೆ, ಇದೇ ಶಾಲಾ ಆವರಣದ ತಂತಿ ಬೇಲಿಗೆ ತಾಗಿಯೇ ವಿದ್ಯುತ್ ಟ್ರಾನ್ಸಫಾರ್ಮರ್ ಇದೆ. ಅದ್ರಿಂದ ವಿದ್ಯುತ್ ತಂತಿ ಬೇಲಿ ಮೇಲೆ ಬಿದ್ದು ಘಟನೆ ಸಂಭವಿಸಿದೆ ಎನ್ನಲಾಗ್ತಿದೆ. ಇಲ್ಲಿ ಹಾಗೆ ವಿದ್ಯುತ್ ಹರಿದು ಬಿದ್ದರೂ ಹೆಸ್ಕಾಂ ಸಿಬ್ಬಂದಿಗಳು ಗಮನಿಸಲೇ ಇಲ್ವಾ ಅನ್ನೋ ಪ್ರಶ್ನೆ ಎದುರಾಗಿದೆ.

ರವಿವಾರ ರಜೆ, ತಪ್ಪಿದ ಅನಾಹುತ..!
ಅಸಲು, ಇವತ್ತು ರವಿವಾರ ರಜೆ. ಶಾಲಾ ಮಕ್ಕಳು ಶಾಲೆಗೆ ಬಂದಿಲ್ಲ. ಈ ಕಾರಣಕ್ಕಾಗೇ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಕಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಮಕ್ಕಳು ನಿತ್ಯವೂ ಇಲ್ಲಿಯೇ ಇರ್ತಾರೆ. ಆ ಹೊತ್ತಲ್ಲಿ ಹೀಗೆ ಬೇಲಿಯಲ್ಲಿ ವಿದ್ಯುತ್ ಪ್ರವಹಿಸಿದ್ದರೆ ಗತಿ ಏನಾಗುತ್ತಿತ್ತು..? ಒಮ್ಮೆ ಯೊಚಿಸಿ‌. ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷಕ್ಕೆ ಬಡಜೀವ ಬಲಿಯಾಯ್ತು ಅಂತಿದಾರೆ ಗ್ರಾಮಸ್ಥರು.

ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇನ್ನು, ಮೃತನ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ. ಹೆಸ್ಕಾಂ ನಿರ್ಲಕ್ಷದ ವಿರುದ್ಧ ಜನ ಆಕ್ರೋಶಗೊಂಡಿದ್ದಾರೆ. ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ಸಿಗುವಂತಾಗಲಿ ಅಂತಿದಾರೆ ಜನ‌. ಖಂಡಿತ ಸಿಗಲೇ ಬೇಕಿದೆ‌ ಅಲ್ವಾ‌..?