ಶಿರಸಿ ನಗರ ಠಾಣೆ ಪೊಲೀಸ್ರ ಭರ್ಜರಿ ಕಾರ್ಯಾಚರಣೆ;  ಸೆಂಟ್ರಲ್ ಬಸ್‌ಸ್ಟ್ಯಾಂಡ್‌ನಲ್ಲಿ ಕಳ್ಳತನ ಮಾಡಿದ್ದ ಅಂತರ ಜಿಲ್ಲಾ ಖತರ್ನಾಕ ಕಳ್ಳಿ ಅಂದರ್..!

ಶಿರಸಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಗಮನ ಬೇರೆಡೆ ಹರಿಸಿ ಕಳ್ಳತನ ಮಾಡುತ್ತಿದ್ದ ಅಂತರ ಜಿಲ್ಲಾ ಮಹಿಳಾ ಆರೋಪಿಯನ್ನ ಶಿರಸಿ ನಗರ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಹೆಡೆಮುರಿ ಕಟ್ಟಿದ್ದಾರೆ. ಬಂಧಿತಳಿಂದ ಒಟ್ಟು 9 ಲಕ್ಷ ರೂ. ಮೌಲ್ಯದ 70 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

​ಹೇಗಾಗಿತ್ತು ಕೇಸ್..!
ಅಂದಹಾಗೆ, ​ದಿನಾಂಕ 03-06-2026 ರಂದು ಮಧ್ಯಾಹ್ನ ಸೌರಬ ತಾಲೂಕಿನ ಚಂದ್ರಗುತ್ತಿ ನಿವಾಸಿ ಶ್ರೀಮತಿ ಸವಿತಾ ಎಂಬುವವರು ತಮ್ಮ ಅಕ್ಕ ನಾಗರತ್ನ ಅವರಿಗೆ ಶಿರಸಿ-ಬನವಾಸಿ ಬಸ್ ಹತ್ತಿಸಲು ಶಿರಸಿ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಜನಜಂಗುಳಿಯ ಲಾಭ ಪಡೆದ ಕಳ್ಳರು, ಸವಿತಾ ಅವರ ವ್ಯಾನಿಟಿ ಬ್ಯಾಗ್‌ನ ಜಿಪ್ ತೆಗೆದು ಅದರಲ್ಲಿದ್ದ ಸ್ಟೀಲ್ ಬಾಕ್ಸ್‌ನಿಂದ ಅಂದಾಜು 1 ಲಕ್ಷ ರೂ. ಮೌಲ್ಯದ 20 ಗ್ರಾಂ ತೂಕದ ಚಿನ್ನದ ಸರ, 50 ಸಾವಿರ ರೂ. ಮೌಲ್ಯದ ಚಿನ್ನದ ಕಿವಿ ಬೆಂಡೋಲೆ, ಸರಪಳಿ, ಮಾಟಿ ಹಾಗೂ ನಗದು ಹಣ ಸೇರಿದಂತೆ ಒಟ್ಟು 1 ಲಕ್ಷ 59 ಸಾವಿರ ರೂ. ಮೌಲ್ಯದ ಸ್ವತ್ತುಗಳನ್ನು ಕಳವು ಮಾಡಿದ್ದರು. ಈ ಕುರಿತು ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಖಡಕ್ ತನಿಖೆ..!
​ಪ್ರಕರಣದ ಗಾಂಭೀರ್ಯತೆಯನ್ನು ಪರಿಗಣಿಸಿ ಉತ್ತರ ಕನ್ನಡ ಎಸ್ಪಿ ದೀಪನ್ ಎಂ.ಎನ್. ವಿಶೇಷ ನುರಿತ ತನಿಖಾ ತಂಡವನ್ನು ರಚಿಸಿದ್ದರು. ಈ ತಂಡವು ತೀವ್ರ ಕಾರ್ಯಾಚರಣೆ ನಡೆಸಿ, ದಿನಾಂಕ 25-06-2026 ರಂದು ಆರೋಪಿತೆಯಾದ ಶ್ರೀಮತಿ ಜ್ಯೋತಿ @ ಸಂಜನಾ ಕೋಂ ವೆಂಕಟೇಶ್ ಪಸುಪುಲೇಟ್ (32) ಎಂಬಾಕೆಯನ್ನು ಅರೆಸ್ಟ್ ಮಾಡಿದೆ.

ಆಕೆ ಬೆಂಗಳೂರಿನವಳು..!
ಇನ್ನು, ಅಂತರ ಜಿಲ್ಲಾ ಖತರ್ನಾಕ ಕೈಚಳಕ ತೋರುವ ಜ್ಯೋತಿ ಮೇಡಮ್ಮು, ಮೂಲತಃ ಬೆಂಗಳೂರಿನ ರಾಜಾಜಿನಗರದ ನಿವಾಸಿ. ಕಳ್ಳತನದ ಕೇಸು ಬೆನ್ನತ್ತಿದ ಯುವ ಪೊಲೀಸ್ ಟೀಂ, ಖತರ್ನಾಕ ಕಳ್ಳಿಯ ಅಸಲೀಯತ್ತನ್ನು ಹೊರಗೆಡವಿದ್ದಾರೆ‌. ಬೆಂಗಳೂರಿನಿಂದ ಈಕೆಯ ಸಾಮ್ರಾಜ್ಯ ಬೇಧಿಸಿ ಹೆಡೆಮುರಿಕಟ್ಟಿದ್ದಾರೆ.

ಎರಡೇರಡು ಕಳ್ಳತನ..!
ಅಸಲು, ಈ ಚಾಲಾಕಿ ಕಳ್ಳಿಯ ಅಸಲೀಯತ್ತನ್ನು ಎಳೆಎಳೆಯಾಗಿ ಹೊರ ತೆಗೆಸಿದ ಪೊಲೀಸ್ರಿಗೆ, ಈ ಹಿಂದೆ ಅಂದ್ರೆ, 24-09-2025 ರಂದು ಕೂಡ ಇದೇ ಬಸ್ ನಿಲ್ದಾಣದಲ್ಲಿ ನಡೆದಿದ್ದ ಕಳ್ಳತನ ಕೇಸ್ ನಲ್ಲೂ ಈಕೇಯದ್ದೇ ಕೈ ಕೆಲಸ ಮಾಡಿತ್ತು ಅನ್ನೋದು ಕನ್ಫರ್ಮ್ ಆಗಿದೆ. ಹೀಗಾಗಿ, ​ಬಂಧಿತಳಿಂದ ಶಿರಸಿ ನಗರ ಠಾಣೆಯ ಎರಡೂ ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 9 ಲಕ್ಷ ರೂಪಾಯಿ ಮೌಲ್ಯದ 70 ಗ್ರಾಂ ಚಿನ್ನದ ಆಭರಣಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

​ಪೊಲೀಸ್ ತಂಡಕ್ಕೆ ಪ್ರಶಂಸೆ..!
​ಉತ್ತರ ಕನ್ನಡ ಜಿಲ್ಲಾ ಎಸ್ಪಿ ದೀಪನ್ ಎಂ.ಎನ್ (IPS), ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಜಿ., ಶಿರಸಿ ಉಪವಿಭಾಗದ ಡಿವೈಎಸ್‌ಪಿ ಶ್ರೀಮತಿ ಗೀತಾ ಪಾಟೀಲ್ ಹಾಗೂ ಶಿರಸಿ ಪಿಐ ಸಂಪತ್ ಕೆ.ಸಿ ಮಾರ್ಗದರ್ಶನದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ.

​ಶಿರಸಿ ನಗರ ಠಾಣೆಯ ಪಿಎಸ್‌ಐ (ಎಲ್‌ಐಒ) ನರಸಿಂಹಲು .ಟಿ, ಪಿಎಸ್‌ಐ (ತನಿಖೆ) ನಾರಾಯಣ ರಾಥೋಡ್ ನೇತೃತ್ವದ ತಂಡದಲ್ಲಿದ್ದ ಸಿಬ್ಬಂದಿಗಳಾದ ಕೋಟೇಶ್ ನಾಗರೊಳ್ಳಿ, ರಾಮಯ್ಯ ಪೂಜಾರಿ, ಹನುಮಂತ್ ಮಾಕಾಪೂರ, ಸದ್ದಾಂ ಹುಸೇನ್, ಚನ್ನಬಸಪ್ಪ .ಕೆ, ರಾಜು .ಎಮ್, ಸುನೀಲ್, ಪ್ರಶಾಂತ್, ಶಂಕರಮ್ಮ, ದೀಪಾ ಹಾಗೂ ಕಾರವಾರ ಟೆಕ್ನಿಕಲ್ ಸೆಲ್‌ನ ಉದಯ ಗುಣಗಾ ಮತ್ತು ಬಬನ ಕದಂ ಅವರ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್ ಅವರು ಶ್ಲಾಘಿಸಿ, ಪ್ರಶಂಸೆ ವ್ಯಕ್ತಪಡಿಸಿದ್ದಾರೆ.