ಮುಂಡಗೋಡ ತಾಲೂಕಿನಲ್ಲಿ ಅಕ್ಷರಶಃ ಗುಜರಿಗೆ ಸೇರಿದ್ದ ಕಾನೂನು ಸುವ್ಯವಸ್ಥೆ ತಹಬದಿಗೆ ಬರತ್ತಾ..? ಇಲ್ಲಿನ ಪೊಲೀಸ್ ಠಾಣೆಯ ಗೋಡೆಗಳಲ್ಲಿ ಬಣ್ಣ ಬಣ್ಣದ ಚಿತ್ತಾರಗಳೇನೋ ಮಿಂಚುತ್ತಿವೆ. ಆದ್ರೆ ಆದರಾಚೆಗೆ ಇಡೀ ತಾಲೂಕಿನಲ್ಲಿ ಸದ್ಯ ಕಾನೂನು ಸುವ್ಯವಸ್ಥೆ ಅನ್ನೋದು ಎಷ್ಟರ ಮಟ್ಟಿಗೆ ಹೊಳೆಯುತ್ತಿದೆ..? ಎಸ್ಪಿ ಸಾಹೇಬರೇ ಉತ್ತರಿಸಬೇಕು..!

ಅವೇಲ್ಲ ಸ್ಮೋ”ಕಿಂಗ್” ಅಡ್ಡೆಗಳಾ..?
ಅಸಲು, ಮುಂಡಗೋಡಿನಲ್ಲಿ ಹೆಜ್ಜೆಗೊಂದರಂತೆ ತಲೆ ಎತ್ತಿಕೊಂಡಿರೋ ಸಿಗರೇಟ್ ಸ್ಮೋಕಿಂಗ್ ಅಡ್ಡೆಗಳೂ ಸೇರಿದಂತೆ ಅವುಗಳಲ್ಲೆಲ್ಲ ಅದೇನೇನು ನಡೆಯುತ್ತಿದೆ..? ಅಲ್ಲಿ ನಿತ್ಯವೂ ಎಲ್ಲೆಲ್ಲಿಂದ, ಎಂತೆಂಥವರು, ಎಷ್ಟು ಜನ ಬಂದು ಏನೇನು “ಸೇದಿ” ಹೋಗ್ತಿದಾರೆ..? ಅವೇಲ್ಲ ರಾತ್ರಿ ಅದೇಷ್ಟು ಹೊತ್ತು ಎನೇನೆಲ್ಲ ಮಾಡ್ತಿವೆ..? ಯಾರಂದ್ರೆ, ಯಾರಿಗೂ ಗೊತ್ತಿಲ್ಲ…!

ಬಹುಶಃ, ಇದೇಲ್ಲವನ್ನು ಅರ್ಥ ಮಾಡಿಕೊಳ್ಳೊಕೆ ನಿಜಕ್ಕೂ ಮುಂಡಗೋಡಿಗೆ ಓರ್ವ ದಕ್ಷ ಖಡಕ್ ಪೊಲೀಸ್ ಅಧಿಕಾರಿಯ ಅವಶ್ಯಕತೆ ಇದೆ ಅಂತಾ ಪ್ರಜ್ಞಾವಂತರು ಹಲಬುತ್ತಿದ್ದಾರೆ. ಆದ್ರೆ ಆ ಭಾಗ್ಯ ಯಾವಾಗ ಅನ್ನೋದೇ ಸದ್ಯದ ಪ್ರಶ್ನೆ..!
ನಿಜಕ್ಕೂ ಮುಂಡಗೋಡ ಪೊಲೀಸ್ ಠಾಣೆ ಅಂದ್ರೆ ಇಡೀ ಜಿಲ್ಲೆಯಲ್ಲೇ ಕೆಟ್ಟು ಖರಾಬು ಹೆಸರಾಗಿದೆ. ಹಿರಿಯ ಅಧಿಕಾರಿಗಳು ಮುಂಡಗೋಡ ಠಾಣೆ ಅಂದ್ರೆ “ಛೇ” ಅನ್ನೋ ಮಟ್ಟಿಗೆ ಗಬ್ಬೇದ್ದು ಹೋಗಿದೆ ಅನ್ನೋದು ಆರೋಪ. ಈ ಕಾರಣಕ್ಕಾಗೇ ಏನೋ ಬಹುಶಃ ಇಲ್ಲಿನ ಅಧಿಕಾರಿಗಳನ್ನ ನೆಚ್ಚಿ ಕೂತರೆ ಮುಂಡಗೋಡ ಮತ್ತಷ್ಟು ಅಧೋಗತಿಗೆ ಇಳಿಯತ್ತೆ ಅನ್ನೋದು ಎಸ್ಪಿ ಸಾಹೇಬ್ರಿಗೆ ಅರ್ಥವಾಗಿರಬೇಕು. ಆ ಕಾರಣಕ್ಕಾಗೇ ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ನೇತೃತ್ವದಲ್ಲಿ ಮುಂಡಗೋಡಿನ ಮೀಟರ್ ಬಡ್ಡಿ ಕುಳಗಳು ಹಾಗೂ ರೌಡಿಶೀಟರ್ ಗಳಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ಮುಂಡಗೋಡಿನ ಶಾಂತಿ ಕಾಪಾಡುವ ಮತ್ತು ಸಾರ್ವಜನಿಕರ ಸುರಕ್ಷತೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಉತ್ತರ ಕನ್ನಡ ಎಸ್ಪಿ ದೀಪನ್ ಎಂ.ಎನ್. ಅಲರ್ಟ್ ಆಗಿದ್ದಾರೆ.

ಬೆಳ್ಳಂ ಬೆಳಿಗ್ಗೆ ರೇಡ್..!
ಅದರ ಭಾಗವಾಗೇ, ದಕ್ಷ, ಖಡಕ್ ಅಧಿಕಾರಿ ಶಿರಸಿ ಡಿವೈಎಸ್ಪಿ ಶ್ರೀಮತಿ ಗೀತಾ ಪಾಟೀಲ್ ನೇತೃತ್ವದ ಬನವಾಸಿ, ಶಿರಸಿ ಹಾಗೂ ಮುಂಡಗೋಡ ಪೊಲೀಸರ ಟೀಂ ಬುಧವಾರ ಬೆಳಿಗ್ಗೆ, ರೌಡಿ ಅಸಾಮಿಗಳು ಹಾಗೂ ಅಕ್ರಮ ಬಡ್ಡಿ ವ್ಯವಹಾರ ನಡೆಸುವವರ ಮನೆಗಳ ಮೇಲೆ ಭರ್ಜರಿ ಜಂಟಿ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ರು.

ನ್ಯಾಯಾಲಯದ ಆದೇಶ..!
ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ರೌಡಿ ಅಸಾಮಿಗಳು ಹಾಗೂ ಅಕ್ರಮ ಮೀಟರ್ ಬಡ್ಡಿ ದಂಧೆ ನಡೆಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸರು ಮಾನ್ಯ ನ್ಯಾಯಾಲಯದಿಂದ ಮುಂಚಿತವಾಗಿಯೇ ಆದೇಶ ಪಡೆದುಕೊಂಡಿದ್ದರು. ಹಿರಿಯ ಅಧಿಕಾರಿಗಳ ಸೂಕ್ತ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ಹೆಣೆಯಲಾಗಿತ್ತು.

ಬುಧವಾರ ಬೆಳಗ್ಗೆ..!
ಬುಧವಾರ ಬೆಳ್ಳಂ ಬೆಳಿಗ್ಗೆ ಮುಂಡಗೋಡ ಪಟ್ಟಣ ಸೇರಿ ತಾಲೂಕು ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಏಕಕಾಲಕ್ಕೆ ಪೊಲೀಸರ ತಂಡಗಳು ದಾಳಿ ನಡೆಸಿದವು. ರೌಡಿ ಶೀಟರ್‌ಗಳ ಹಾಗೂ ಸಂಶಯಾಸ್ಪದ ವ್ಯಕ್ತಿಗಳ ಮನೆಗಳನ್ನು ಕೂಲಂಕುಷವಾಗಿ ತಪಾಸಣೆ ನಡೆಸಿದ್ರು. ಆದ್ರೆ, ತಪಾಸಣೆ ವೇಳೆ ಸಿಕ್ಕಿದ್ದಾದ್ರೂ ಏನು ಅನ್ನೊ ಪ್ರಶ್ನೆ ಮಾತ್ರ ಇನ್ನೂ ಜೀವಂತವಿದೆ.
ಯಾರ ಯಾರ ಮನೆ ಶೋಧ..?
ಪೊಲೀಸರು ನೀಡಿದ ಪ್ರಕಟಣೆಯ ಪ್ರಕಾರ, ಮುಂಡಗೋಡಿನ ವಿವಿಧ ಭಾಗಗಳಿಗೆ ಸೇರಿದ ಈ ಕೆಳಗಿನ ವ್ಯಕ್ತಿಗಳ ಮನೆಗಳನ್ನು ಶೋಧಿಸಲಾಗಿದೆಯಂತೆ.
1. ಕಿರಣ ಪ್ರಕಾಶ್ ಸೋಳಂಕಿ, (29) ಆನಂದ ನಗರ, ಮುಂಡಗೋಡ.
2. ಮಂಜು ನವಲೆ ಅರ್ಜುನ ನವಲೆ(28) ಗಾಂಧಿನಗರ, ಮುಂಡಗೋಡ
3. ಮಲ್ಲಿಕಜಾನ @ ಜಹೀರ ಶಬ್ಬೀರ ಶೇಖ(28) – ಕಿಲ್ಲೆ ಓಣಿ, ಮುಂಡಗೋಡ.
4. ಮಹಮ್ಮದ ಸಾದಿಕ್ ಮೋಹಿನಸಾಬ ಗಾಜೀಪುರ (26) – ಇಂದಿರಾನಗರ ಸ್ಲಮ್, ಮುಂಡಗೋಡ
5. ವಾಸಿಂಖಾನ್ ಗೂಡುಖಾನ್ ಬೆಂಡಿಗೇರಿ(30) ಆನಂದನಗರ, ಮುಂಡಗೋಡ
6. ಮಕ್ತುಂಅಹಮದ ರಜಾಕಶಾ ಯಕ್ಲಾಸಪುರ, (39) ವೈ ಬಿ ರೋಡ್, ಮುಂಡಗೋಡ
7. ಮದುಸಿಂಗ್ ಗಂಗಾರಾಮಸಿಂಗ್ ರಜಪೂತ, (32) – ಬಸಾಪುರ, ತಾಲೂಕು ಮುಂಡಗೋಡ
8. ಮಂಜುನಾಥ ಹೋತಕರ @ ಶೇರಖಾನೆ ಕಾಂತೇಶ ಹೋತಕರ, (26) ಕಂಬಾರಗಟ್ಟಿ ಪ್ಲಾಟ್, ಮುಂಡಗೋಡ
9. ಮಹಮ್ಮದ ಇಬ್ರಾಹಿಂ @ ರಫೀಕ್ ಮಕ್ಕಳಸಾಬ ಜಮಖಂಡಿ, (30) ಚೌಡಳ್ಳಿ ತಾಂಡಾ, ಮುಂಡಗೋಡ
10. ಹರುಣ ಶೇಖ ಹಮ್ಮದ್ ಶೇಖ, (21) – ಕಿಲ್ಲೆ ಓಣಿ, ಮುಂಡಗೋಡ.
11. ಮಹಮ್ಮದ ಯೂಸುಪ್ ರಿಯಾಜ್‌ಅಹ್ಮದ್ ಗಡವಾಲೆ, (22) – ಕಿಲ್ಲೆ ಓಣಿ, ಮುಂಡಗೋಡ
12. ಮಹಮ್ಮದ ಇಸ್ಮಾಯಿಲ್ ಸೈಫುದ್ದೀನ್ ಖಾನವಾಲೆ, (26) – ದೇಶಪಾಂಡೆ ನಗರ, ಮುಂಡಗೋಡ.
13. ಸಂಜು ನವಲೆ ಅರ್ಜುನ ನವಲೆ, (29) – ಗಾಂಧಿನಗರ, ಮುಂಡಗೋಡ
14. ತೌಸಿಫ್ ಅಹಮದ್ ಪಣಿಬಂದ ಮಹಬೂಬಸಾಬ್ ಪಣಿಬಂದ, (35) – ನೆಹರು ನಗರ, ಮುಂಡಗೋಡ.
ಎಸ್ಪಿ ಎಚ್ಚರಿಕೆ ಸಂದೇಶ..!
ಇನ್ನು, ಪಟ್ಟಣದಲ್ಲಿ ಶಾಂತಿ ಭಂಗ ಉಂಟುಮಾಡುವ ಯಾವುದೇ ಅಕ್ರಮ ಚಟುವಟಿಕೆಗಳು, ರೌಡಿಸಂ ಅಥವಾ ಸಾರ್ವಜನಿಕರನ್ನು ಸುಲಿಯುವ ಅಕ್ರಮ ಬಡ್ಡಿ ದಂಧೆಗಳನ್ನು ಸಹಿಸುವುದಿಲ್ಲ. ಇಂತಹ ವ್ಯಕ್ತಿಗಳ ಮೇಲೆ ನಿರಂತರ ನಿಗಾ ಇರಿಸಲಾಗುವುದು ಅಂತಾ ಉತ್ತರ ಕನ್ನಡ ಎಸ್ಪಿ ದೀಪನ್ ಎಂ.ಎನ್. ಎಚ್ಚರಿಕೆ ನೀಡಿದ್ದಾರೆ.
