ಕಾರನ್ನು ಓವರ್‌ಟೇಕ್ ಮಾಡಲು ಹೋಗಿ ಸ್ಕೂಟಿಯೊಂದು ಎದುರಿನಿಂದ ಬಂದ ಕೆಎಸ್ಆರ್‌ಟಿಸಿ (KSRTC) ಬಸ್‌ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಭೀಕರ ದುರ್ಘಟನೆ ರವಿವಾರ ಸಂಜೆ ರಾಷ್ಟ್ರೀಯ ಹೆದ್ದಾರಿ-52ರ ಚಿಕ್ಕಮಾವಳ್ಳಿ ಕ್ರಾಸ್ ಬಳಿ ನಡೆದಿದೆ.
ಹಳೆ ಹುಬ್ಬಳ್ಳಿ ನಿವಾಸಿಗಳಾದ ಮಂಜುನಾಥ (27) ಹಾಗೂ ಸುಮೀತ್ (18) ಮೃತಪಟ್ಟ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ಅಪಘಾತ ನಡೆದಿದ್ದು ಹೇಗೆ?
ಕಾರವಾರದಿಂದ ಸಿಂಧನೂರಿಗೆ ತೆರಳಿ ಮರಳುತ್ತಿದ್ದ ಕೆಎಸ್ಆರ್‌ಟಿಸಿ ಬಸ್ (ನೊಂದಣಿ ಸಂಖ್ಯೆ: KA-31 F-1664) ಚಿಕ್ಕಮಾವಳ್ಳಿ ಕ್ರಾಸ್ ಬಳಿ ಬರುತ್ತಿದ್ದಾಗ, ಯಲ್ಲಾಪುರ ಕಡೆಯಿಂದ ಹುಬ್ಬಳ್ಳಿ ಕಡೆಗೆ ತೆರಳುತ್ತಿದ್ದ ಸ್ಕೂಟಿ (ನೊಂದಣಿ ಸಂಖ್ಯೆ: KA-63 EB-8690) ತನ್ನ ಮುಂಭಾಗದಲ್ಲಿ ಸಾಗುತ್ತಿದ್ದ ಕಾರನ್ನು ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಓವರ್‌ಟೇಕ್ ಮಾಡಲು ಮುಂದಾಗಿದೆ. ಈ ವೇಳೆ ಎದುರಿನಿಂದ ಬರುತ್ತಿದ್ದ ಬಸ್‌ಗೆ ಸ್ಕೂಟಿ ನೇರವಾಗಿ ಮುಖಾಮುಖಿ ಡಿಕ್ಕಿ ಹೊಡೆದಿದೆ. ಪರಿಣಾಮ ಭೀಕರ ಅಪಘಾತ ಸಂಭವಿಸಿ ಇಬ್ಬರೂ ಸವಾರರು ದುರ್ಮರಣ ಹೊಂದಿದ್ದಾರೆ.
ಹೆಲ್ಮೆಟ್ ಧರಿಸದ ಸವಾರರು..!
ಅಪಘಾತದ ಸಮಯದಲ್ಲಿ ಸ್ಕೂಟಿಯಲ್ಲಿದ್ದ ಇಬ್ಬರೂ ಸವಾರರು ಹೆಲ್ಮೆಟ್ ಧರಿಸಿರಲಿಲ್ಲ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಸ್ಕೂಟಿ ಚಾಲಕ ಮಂಜುನಾಥ ಹಾಗೂ ಹಿಂಬದಿ ಸವಾರ ಸುಮೀತ್ ಅವರ ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಘಟನೆಯಲ್ಲಿ ಸ್ಕೂಟಿ ಹಾಗೂ ಬಸ್ ಎರಡೂ ವಾಹನಗಳಿಗೂ ಹಾನಿಯಾಗಿದೆ.
ಬಸ್ ನಿರ್ವಾಹಕ ಸುರೇಶ್ ಗುಬ್ಬಿವಾಡ ನೀಡಿದ ದೂರಿನ ಮೇರೆಗೆ, ಮೃತ ಸ್ಕೂಟಿ ಚಾಲಕನ ವಿರುದ್ಧ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
