ಇನ್ ಸ್ಟಾಗ್ರಾಂ ನಲ್ಲಿ ಪರಿಚಯ, ಅಪ್ರಾಪ್ತೆಯ ಜೊತೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಆರೋಪ, ಇಂದೂರಿನ ಯುವಕನ ವಿರುದ್ಧ ಪೋಕ್ಸೋ ಕೇಸ್

ಇನ್‌ಸ್ಟಾಗ್ರಾಂ (Instagram) ಮೂಲಕ ಅಪ್ರಾಪ್ತ ಬಾಲಕಿಯ ಪರಿಚಯ ಮಾಡಿಕೊಂಡು, ಆಕೆಯನ್ನು ಪುಸಲಾಯಿಸಿ, ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆ ಮುಂಡಗೋಡಿನಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ಪೋಕ್ಸೋ (POCSO) ಹಾಗೂ ಬಿ.ಎನ್.ಎಸ್ ಕಾಯ್ದೆಯಡಿ ಕೇಸು ದಾಖಲಾಗಿದೆ.

​ದೂರಿನಲ್ಲಿ ಏನಿದೆ..?
ಅಸಲು, ​ಮುಂಡಗೋಡ ತಾಲೂಕಿನ ಇಂದೂರು ನಿವಾಸಿಯಾದ ಮಂಜುನಾಥ ಯಲ್ಲಪ್ಪ ವಾಲಿಕಾರ (25) ಎಂಬಾತನೇ ಅತ್ಯಾಚಾರದ ಆರೋಪಿಯಾಗಿದ್ದಾನೆ. ಕೂಲಿ ಕೆಲಸ ಮಾಡಿಕೊಂಡಿದ್ದ ಈತನಿಗೆ, 17 ವರ್ಷ 1 ತಿಂಗಳ ಪ್ರಾಯದ ಅಪ್ರಾಪ್ತ ಬಾಲಕಿಯೊಂದಿಗೆ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿತ್ತು. ಈ ಪರಿಚಯದ ಲಾಭ ಪಡೆದು ಆರೋಪಿಯು ಬಾಲಕಿಯೊಂದಿಗೆ ಸಲುಗೆಯಿಂದ ಇದ್ದ ಎನ್ನಲಾಗಿದೆ.

​ಮೊದಲ ಘಟನೆ..!
ಕಳೆದ ಜೂನ್ 14, 2026 ರಂದು ಮಧ್ಯಾಹ್ನ ಸುಮಾರು 3:00 ಗಂಟೆಗೆ ಆರೋಪಿಯು ಅಪ್ರಾಪ್ತ ಬಾಲಕಿಯನ್ನು ಮುಂಡಗೋಡ ಪಟ್ಟಣದ ಫಾರೆಸ್ಟ್ ಇಲಾಖೆಯ ಗಾರ್ಡನ್‌ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಅಂತಾ ಬಾಲಕಿಯ ಕುಟುಂಬಸ್ಥರು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ದೂರಿನಲ್ಲಿ ಮಾಹಿತಿ ನೀಡಿದ್ದಾರೆ.

​ಅಪಹರಣ..!
ತದನಂತರ ಜುಲೈ 02, 2026 ರಂದು ದೂರುದಾರರ ಮನೆಯಿಂದ ಬಾಲಕಿಯನ್ನು ಅಪಹರಿಸಿದ ಆರೋಪಿ, ತನ್ನ ಮೋಟಾರ್ ಸೈಕಲ್ ಮೇಲೆ ಮುಂಡಗೋಡ ಬಸ್ ನಿಲ್ದಾಣಕ್ಕೆ ಕರೆತಂದಿದ್ದಾನೆ. ಅಲ್ಲಿಂದ ಹುಬ್ಬಳ್ಳಿ ಹಾಗೂ ಗೋವಾಕ್ಕೆ ಬಾಲಕಿಯನ್ನು ಕರೆದೊಯ್ದಿದ್ದಾನೆ ಅಂತಾ ದೂರಿನಲ್ಲಿ ಉಲ್ಲೇಖಿಸಲಾಗಿದೆ.

​ಗೋವಾದಲ್ಲಿಯೂ ದೌರ್ಜನ್ಯ..!
ಇನ್ನು, ಗೋವಾಕ್ಕೆ ಕರೆದೊಯ್ದ ಬಳಿಕವೂ ಆರೋಪಿಯು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ, ​ಬಾಲಕಿಯ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಮುಂಡಗೋಡ ಪೊಲೀಸರು ಆರೋಪಿ ಮಂಜುನಾಥ ವಾಲಿಕಾರ ವಿರುದ್ಧ ಪೋಕ್ಸೋ ಕೇಸು ದಾಖಲಿಸಿಕೊಂಡಿದ್ದಾರೆ.