ಕಾರವಾರ: ಭಾರತೀಯ ಹವಾಮಾನ ಇಲಾಖೆ (IMD) ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಜುಲೈ 5ರಿಂದ, ಜುಲೈ 9ರ ವರೆಗೆ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಈ ಅವಧಿಯಲ್ಲಿ ಜಿಲ್ಲೆಯಾದ್ಯಂತ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದ ಬಲವಾದ ಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಜಿಲ್ಲಾಡಳಿತವು ಈಗಾಗಲೇ ಮುಂಗಾರು ಪೂರ್ವ ಸಿದ್ಧತೆಗಳನ್ನು ಕೈಗೊಂಡಿದೆ.

ಸಾರ್ವಜನಿಕರು ಮತ್ತು ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳು ಈ ಕೆಳಗಿನ ಪ್ರಮುಖ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ.
ತುರ್ತು ಕಾರ್ಯಾಚರಣೆ ಕೇಂದ್ರ..! ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 24×7 ಕಾರ್ಯನಿರ್ವಹಿಸುವ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರವನ್ನು ತೆರೆಯಲಾಗಿದೆ. ಹವಾಮಾನದ ನಿರಂತರ ಮಾಹಿತಿಗಾಗಿ ಸಾರ್ವಜನಿಕರು ಜಿಲ್ಲಾಧಿಕಾರಿಗಳ ಸಾಮಾಜಿಕ ಜಾಲತಾಣಗಳು ಹಾಗೂ ಸ್ಥಳೀಯ ಸುದ್ದಿ ಮಾಧ್ಯಮಗಳನ್ನು ಗಮನಿಸಬಹುದಾಗಿದೆ.
ಮೀನುಗಾರರಿಗೆ ಕಟ್ಟುನಿಟ್ಟಿನ ಎಚ್ಚರಿಕೆ..! ಬಲವಾದ ಗಾಳಿ ಬೀಸುವ ಮುನ್ಸೂಚನೆ ಇರುವುದರಿಂದ ಮೀನುಗಾರರು ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯಬಾರದು. ಈಗಾಗಲೇ ಸಮುದ್ರದಲ್ಲಿರುವವರು ತಕ್ಷಣವೇ ಹತ್ತಿರದ ಸುರಕ್ಷಿತ ಬಂದರುಗಳಿಗೆ ಮರಳಬೇಕು.
ಜಲಮೂಲಗಳಿಗೆ ಭೇಟಿ ನಿಷೇಧ..! ಪ್ರವಾಸಿಗರು ಮತ್ತು ಸಾರ್ವಜನಿಕರು ಸಮುದ್ರತೀರ, ನದಿತೀರ, ಜಲಾಶಯಗಳು ಹಾಗೂ ಇತರೆ ಅಪಾಯಕಾರಿ ಪ್ರದೇಶಗಳಿಗೆ ಭೇಟಿ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಶಾಲೆ ಮತ್ತು ಅಂಗನವಾಡಿಗಳಿಗೆ ಸೂಚನೆ..! ಬಲವಾದ ಗಾಳಿ ಬೀಸುವ ಸಂದರ್ಭದಲ್ಲಿ ಅಪಾಯಕಾರಿ ಮರಗಳು ಅಥವಾ ಶಿಥಿಲಾವಸ್ಥೆಯ ಕಟ್ಟಡಗಳ ಸಮೀಪವಿರುವ ಕೊಠಡಿಗಳಲ್ಲಿ ಶಾಲೆ ಹಾಗೂ ಅಂಗನವಾಡಿ ತರಗತಿಗಳನ್ನು ನಡೆಸಬಾರದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಸೂಕ್ತ ಮೇಲ್ವಿಚಾರಣೆ ನಡೆಸಲು ಆದೇಶಿಸಲಾಗಿದೆ.
ಪ್ರಯಾಣ ಮತ್ತು ವಾಹನ ಸವಾರರಿಗೆ..! ಸಾರ್ವಜನಿಕರು ಅನಗತ್ಯವಾಗಿ ಮನೆಯಿಂದ ಹೊರಗೆ ಸಂಚರಿಸುವುದನ್ನು ತಪ್ಪಿಸಬೇಕು. ಮರಗಳು, ವಿದ್ಯುತ್ ಕಂಬಗಳು, ಜಾಹೀರಾತು ಫಲಕಗಳು ಮತ್ತು ತಾತ್ಕಾಲಿಕ ಶೆಡ್‌ಗಳ ಸಮೀಪ ವಾಹನಗಳನ್ನು ನಿಲ್ಲಿಸಬಾರದು ಅಥವಾ ನಿಲ್ಲಬಾರದು. ಗ್ರಾಮೀಣ ಭಾಗದ ಕಾಲುಸಂಕ, ಕಿರು ಸೇತುವೆಗಳನ್ನು ಬಳಸುವಾಗ ವಿಶೇಷ ಎಚ್ಚರಿಕೆ ವಹಿಸಬೇಕು.
ರೈತರಿಗೆ ಮತ್ತು ನಿವಾಸಿಗಳಿಗೆ ಸೂಚನೆ..! ಕೃಷಿಕರು ಮಳೆ ಮತ್ತು ಗಾಳಿಯ ಸಮಯದಲ್ಲಿ ಕೃಷಿ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಬೇಕು. ಶಿಥಿಲಾವಸ್ಥೆಯ ಮನೆ ಅಥವಾ ಕಾಂಪೌಂಡ್ ಗೋಡೆಗಳ ಬಳಿ ವಾಸಿಸುವವರು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಅಥವಾ ತಹಶೀಲ್ದಾರರು ಗುರುತಿಸಿರುವ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಗೊಳ್ಳಬೇಕು.
ವಿದ್ಯುತ್ ಉಪಕರಣಗಳಿಂದ ದೂರವಿರಿ..!ತುಂಡಾದ ವಿದ್ಯುತ್ ತಂತಿಗಳು ಹಾಗೂ ವಾಲಿರುವ ವಿದ್ಯುತ್ ಕಂಬಗಳ ಹತ್ತಿರ ಹೋಗಬಾರದು. ಇಂತಹ ಘಟನೆಗಳು ಕಂಡುಬಂದಲ್ಲಿ ತಕ್ಷಣ ವಿದ್ಯುತ್ ಇಲಾಖೆ ಅಥವಾ ಜಿಲ್ಲಾ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಬೇಕು.
ತುರ್ತು ಸೇವೆಗಾಗಿ ಸಹಾಯವಾಣಿ..!
ಸಾರ್ವಜನಿಕರು ಯಾವುದೇ ಅಪಾಯಕಾರಿ ಪರಿಸ್ಥಿತಿ ಅಥವಾ ಜೀವಹಾನಿ ಸಂಭವಿಸಬಹುದಾದ ಮುನ್ಸೂಚನೆ ಕಂಡುಬಂದಲ್ಲಿ ತಕ್ಷಣವೇ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಲು ಕೋರಲಾಗಿದೆ:
24×7 ಕಂಟ್ರೋಲ್ ರೂಮ್: 08382-229857
ವಾಟ್ಸಾಪ್ ಸಂಖ್ಯೆ: 9483511015
ಅಥವಾ ಸ್ಥಳೀಯ ತಾಲೂಕು ತಹಶೀಲ್ದಾರರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.
