ಮುಂಡಗೋಡ ತಾಲೂಕಿನ ಕುಸೂರು ಗ್ರಾಮದ ಕಿರಣ್ ಇಂದ್ರಜಿತ್ ರಾಠೋಡ್ (29) ಎಂಬ ಯುವಕ ಕಳೆದ ಜೂನ್ 8 ರಿಂದ ನಿಗೂಢವಾಗಿ ನಾಪತ್ತೆಯಾಗಿದ್ದು, ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಷ್ಟಕ್ಕೂ ಏನಾಯ್ತು..?
ನಾಪತ್ತೆಯಾದ ಕಿರಣ್ ರಾಠೋಡ್ 2019 ರಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಮುಗಿಸಿದ್ದು, ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಸೂಕ್ತ ಸಂಬಳ ಸಿಗದ ಕಾರಣ ಕಳೆದ ಮೂರು ತಿಂಗಳ ಹಿಂದೆ ಕೆಲಸ ಬಿಟ್ಟು ಸ್ವಗ್ರಾಮ ಕುಸೂರಿಗೆ ಮರಳಿದ್ದ. ಇತ್ತೀಚೆಗೆ ಮನೆಯಲ್ಲೇ ಇದ್ದ ಆತ, ಸಂಗೀತದತ್ತ ಆಸಕ್ತಿ ಬೆಳೆಸಿಕೊಂಡು ಯಲ್ಲಾಪುರದ ಮ್ಯೂಸಿಕ್ ಅಕಾಡೆಮಿಯೊಂದರಲ್ಲಿ ಗಿಟಾರ್ ನುಡಿಸುವುದನ್ನು ಕಲಿಯುತ್ತಿದ್ದನು.
ಅವತ್ತು ಜೂನ್ 8..!
ಆದ್ರೆ,ಕಳೆದ ಜೂನ್ 8ರಂದು ಬೆಳಿಗ್ಗೆ ಸುಮಾರು 9:00 ಗಂಟೆಗೆ ಯಲ್ಲಾಪುರಕ್ಕೆ ಕೆಲಸಕ್ಕೆ ಹೋಗುವುದಾಗಿ ಮನೆಯಲ್ಲಿ ಹೇಳಿ ಹೋದ ಕಿರಣ್, ಸಂಜೆಯಾದರೂ ಮನೆಗೆ ಮರಳಿ ಬಂದಿಲ್ಲ. ಆತನ ಮೊಬೈಲ್ ಫೋನ್ ಸಹ ಸ್ವಿಚ್ ಆಫ್ ಆಗಿದೆ. ಮಗ ನಾಪತ್ತೆಯಾದ ಹಿನ್ನೆಲೆಯಲ್ಲಿ ಆತನ ತಂದೆ ಇಂದ್ರಜಿತ್ ರಾಠೋಡ್ ಹಾಗೂ ಕುಟುಂಬಸ್ಥರು ಯಲ್ಲಾಪುರ, ಮುಂಡಗೋಡ ಬಸ್ ನಿಲ್ದಾಣ ಸೇರಿದಂತೆ ಎಲ್ಲಾ ಸಂಬಂಧಿಕರ ಹಾಗೂ ಸ್ನೇಹಿತರ ಮನೆಗಳಲ್ಲಿ ಹುಡುಕಾಟ ನಡೆಸಿದ್ದರೂ ಯಾವುದೇ ಸುಳಿವು ಸಿಕ್ಕಿಲ್ಲ. ಕೊನೆಗೆ ಜೂನ್ 25 ರಂದು ಮುಂಡಗೋಡ ಪೊಲೀಸ್ ಠಾಣೆಗೆ ಬಂದು ಅಧಿಕೃತವಾಗಿ ದೂರು ನೀಡಿದ್ದಾರೆ.
ಈ ದೂರಿನ ಅನ್ವಯ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂಡಗೋಡ ಪೊಲೀಸರು ಯುವಕನ ಪತ್ತೆಗಾಗಿ ತನಿಖೆ ಕೈಗೊಂಡಿದ್ದಾರೆ. ಯುವಕನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಲ್ಲಿ ಸಾರ್ವಜನಿಕರು ತಕ್ಷಣವೇ ಮುಂಡಗೋಡ ಪೊಲೀಸರನ್ನು ಸಂಪರ್ಕಿಸಲು ಕೋರಲಾಗಿದೆ.
