ಉತ್ತರ ಕನ್ನಡ ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣಾ ಪ್ರಗತಿ ಪರಿಶೀಲನೆ: ಸಚಿವ ಯು. ಟಿ. ಖಾದರ್ ಅಧ್ಯಕ್ಷತೆಯಲ್ಲಿ ಸಭೆ..! ಏನೇಲ್ಲಾ ಚರ್ಚೆ ಆಯ್ತು ಗೊತ್ತಾ..?

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಪೂರ್ವಸಿದ್ಧತೆಗಳು ಹಾಗೂ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಗಾಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಮಹತ್ವದ ಪರಿಶೀಲನಾ ಸಭೆ ಜರುಗಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರು ಹಾಗೂ ಉತ್ತರ ಕನ್ನಡ ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣೆಯ ಮೇಲುಸ್ತುವಾರಿ ಸಚಿವ ಯು. ಟಿ ಖಾದರ್ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಿತು.

​ಸಭೆಯಲ್ಲಿ ಜಿಲ್ಲೆಯ ಮಳೆ ಪ್ರಮಾಣ, ಜಲಾಶಯಗಳ ನೀರಿನ ಮಟ್ಟ, ಕುಡಿಯುವ ನೀರಿನ ಸ್ಥಿತಿ ಹಾಗೂ ವಿಪತ್ತು ಎದುರಿಸಲು ಕೈಗೊಳ್ಳಲಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು.

​ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆ..!
​ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ (KSNDMC) ವರದಿಯ ಪ್ರಕಾರ, ಜಿಲ್ಲೆಯಲ್ಲಿ ಈ ಬಾರಿ ಮಳೆಯ ಕೊರತೆ ಕಂಡುಬಂದಿದೆ. ಜೂನ್ 1ರಿಂದ ಜುಲೈ 3ರ ವರೆಗಿನ ಅವಧಿಯಲ್ಲಿ ಜಿಲ್ಲೆಯಲ್ಲಿ 499.1 ಮಿ.ಮೀ ಮಳೆಯಾಗಿದ್ದು, ಇದು ವಾಡಿಕೆ ಮಳೆಗಿಂತ (796.7 ಮಿ.ಮೀ) ಶೇಕಡಾ 37ರಷ್ಟು ಕಡಿಮೆಯಾಗಿದೆ. ಅದೇ ರೀತಿ ಜನವರಿ 1ರಿಂದ ಜುಲೈ 3ರ ವರೆಗಿನ ಒಟ್ಟು ಮಳೆ ಪ್ರಮಾಣದಲ್ಲೂ ಶೇ. 27 ರಷ್ಟು ಕೊರತೆಯಾಗಿದೆ.

​ವಿಪತ್ತು ನಿರ್ವಹಣೆಗೆ 24×7 ಸಿದ್ಧತೆ..!
​ಪ್ರಕೃತಿ ವಿಕೋಪಗಳನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರ (DEOC) ಹಾಗೂ ತಾಲ್ಲೂಕು ತುರ್ತು ಕಾರ್ಯಾಚರಣೆ ಕೇಂದ್ರಗಳನ್ನು (TEOC) ಸಂಪೂರ್ಣವಾಗಿ ಸಕ್ರಿಯಗೊಳಿಸಲಾಗಿದ್ದು, ಇವು ನಿರಂತರವಾಗಿ 24×7 ಕಾರ್ಯನಿರ್ವಹಿಸುತ್ತಿವೆ. ಸಾರ್ವಜನಿಕರ ಅನುಕೂಲಕ್ಕಾಗಿ ಜಿಲ್ಲಾ ಮಟ್ಟದ ಉಚಿತ ಸಹಾಯವಾಣಿ ಸಂಖ್ಯೆ 1077 ಹಾಗೂ ಮೊಬೈಲ್ ಸಂಖ್ಯೆ 9483511015 ಅನ್ನು ಪ್ರಕಟಿಸಲಾಗಿದೆ.

​ಅಲ್ಲದೆ, ಭಾರತ ಹವಾಮಾನ ಇಲಾಖೆಯ (IMD) ಡಾಪ್ಲರ್ ಹವಾಮಾನ ರೇಡಾರ್ ಬಳಸಿ ಪ್ರತಿ 30 ನಿಮಿಷಗಳಿಗೊಮ್ಮೆ ಮೋಡಗಳ ಚಲನೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.

​ಪ್ರಮುಖ ಮುನ್ನೆಚ್ಚರಿಕೆ ಕ್ರಮಗಳು..!
​ಭೂಕುಸಿತ ಪ್ರದೇಶಗಳ ಗುರುತಿಸುವಿಕೆ: ಜಿಐಎಸ್ (GIS) ಆಧಾರಿತ ಸಮೀಕ್ಷೆಯ ಮೂಲಕ ಜಿಲ್ಲೆಯಾದ್ಯಂತ 439 ಭೂಕುಸಿತ ಅಪಾಯದ ಪ್ರದೇಶಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 197 ಹೆಚ್ಚು ಹಾಗೂ ಮಧ್ಯಮ ಅಪಾಯದ ಪ್ರದೇಶಗಳಿಗೆ ‘ಸ್ಪಾಟರ್‌ಗಳನ್ನು’ (Spotters) ನಿಯೋಜಿಸಿ, ಜಿಪಿಎಸ್ ಛಾಯಾಚಿತ್ರಗಳ ಮೂಲಕ ನಿರಂತರ ನಿಗಾ ಇರಿಸಲಾಗಿದೆ.

​ಅಪಾಯಕಾರಿ ಮರಗಳ ತೆರವು..!
ಮುಂಗಾರು ಅವಧಿಯಲ್ಲಿ ಮರ ಬಿದ್ದು ಆಗುವ ಅನಾಹುತಗಳನ್ನು ತಪ್ಪಿಸಲು ಜಿಲ್ಲಾದ್ಯಂತ 1,780 ಅಪಾಯಕಾರಿ ಮರಗಳನ್ನು ಗುರುತಿಸಿ, ಅವುಗಳ ಕಟಾವು ಮತ್ತು ಕೊಂಬೆ ಕತ್ತರಿಸುವ ಕಾರ್ಯ ಪೂರ್ಣಗೊಳಿಸಲಾಗಿದೆ.

​ಕಾಳಜಿ ಕೇಂದ್ರಗಳ ಸಿದ್ಧತೆ..!
ಪ್ರವಾಹ ಅಥವಾ ಭೂಕುಸಿತ ಉಂಟಾದಲ್ಲಿ ತಕ್ಷಣ ಬಳಸಲು ಜಿಲ್ಲೆಯಲ್ಲಿ 294 ಕಾಳಜಿ ಕೇಂದ್ರಗಳು ಹಾಗೂ 107 ಜಾನುವಾರು ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ. ಜಿಲ್ಲೆಯಾದ್ಯಂತ ಒಟ್ಟು 2,390 ಮನೆಗಳು ದುರ್ಬಲಾವಸ್ಥೆಯಲ್ಲಿದೆ ಎಂದು ಗುರುತಿಸಲಾಗಿದೆ.

​ರಚನಾತ್ಮಕ ಸುರಕ್ಷತಾ ವರದಿ..!
ಜಿಲ್ಲೆಯ ಒಟ್ಟು 5,192 ಸರ್ಕಾರಿ ಶಾಲೆ, ಕಾಲೇಜು, ವಸತಿ ನಿಲಯ ಹಾಗೂ ಅಂಗನವಾಡಿ ಕಟ್ಟಡಗಳ ಪೈಕಿ 4,730 ಕಟ್ಟಡಗಳ ಸುರಕ್ಷತಾ ವರದಿಯನ್ನು ಈಗಾಗಲೇ ಸಲ್ಲಿಸಲಾಗಿದ್ದು, 462 ವರದಿಗಳು ಬಾಕಿ ಇವೆ.

​ಜಲಾಶಯಗಳ ಮಟ್ಟ, ಹಾನಿ ವಿವರ..!
​ಜುಲೈ 3ರ ಬೆಳಗಿನ ವರದಿಯಂತೆ ಜಿಲ್ಲೆಯ ಪ್ರಮುಖ ಜಲಾಶಯಗಳಾದ ಸೂಪಾ (ನೀರಿನ ಮಟ್ಟ: 525.20 ಮೀ), ಕದ್ರಾ, ಕೊಡಸಳ್ಳಿ, ಬೊಮ್ಮನಹಳ್ಳಿ ಮತ್ತು ಗೇರುಸೊಪ್ಪ ಅಣೆಕಟ್ಟುಗಳ ನೀರಿನ ಮಟ್ಟ ಹಾಗೂ ಒಳಹರಿವು-ಹೊರಹರಿವಿನ ಮೇಲೆ ನಿರಂತರ ನಿಗಾ ಇಡಲಾಗಿದೆ. ಪ್ರಸ್ತುತ ಮುಂಗಾರು ಅವಧಿಯಲ್ಲಿ ದಾಂಡೇಲಿಯಲ್ಲಿ 1 ಜಾನುವಾರು ಹಾನಿ ಹಾಗೂ ಜಿಲ್ಲಾದ್ಯಂತ 2 ಸಂಪೂರ್ಣ ಮತ್ತು 34 ಭಾಗಶಃ ಮನೆ ಹಾನಿ ಪ್ರಕರಣಗಳು ವರದಿಯಾಗಿದ್ದು, ನಿಯಮಾನುಸಾರ ಪರಿಹಾರ ವಿತರಿಸಲಾಗುತ್ತಿದೆ.

​ಕುಡಿಯುವ ನೀರು & ಕೃಷಿ ಇಲಾಖೆ ಪ್ರಗತಿ..!
ಜಿಲ್ಲೆಯ ​ನಗರ ಪ್ರದೇಶಗಳಲ್ಲಿ ಸದ್ಯಕ್ಕೆ ಯಾವುದೇ ಟ್ಯಾಂಕರ್ ನೀರು ಸರಬರಾಜಿನ ಅಗತ್ಯ ಬಿದ್ದಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಹಂತ-ಹಂತವಾಗಿ ಜಾರಿಗೊಳಿಸಲಾಗುತ್ತಿದೆ. ಕೃಷಿ ಇಲಾಖೆಯು ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ 58,306 ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು, ಈಗಾಗಲೇ 34,493 ಹೆಕ್ಟೇರ್ ಸಾಧನೆಯಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ 9,759 ಮೆಟ್ರಿಕ್ ಟನ್ ವಿವಿಧ ರಸಗೊಬ್ಬರಗಳು ಹಾಗೂ ಭತ್ತ ಮತ್ತು ಮೆಕ್ಕೆಜೋಳದ ಬಿತ್ತನೆ ಬೀಜಗಳು ಸಮರ್ಪಕವಾಗಿ ದಾಸ್ತಾನಿವೆ.

​ಆರ್ಥಿಕ ಲಭ್ಯತೆ..!
​ತುರ್ತು ಪರಿಹಾರ ಕಾರ್ಯಗಳಿಗಾಗಿ ಜಿಲ್ಲೆಯ ಎಲ್ಲಾ ತಹಶೀಲ್ದಾರರ ಪ್ರಕೃತಿ ವಿಕೋಪ ಪಿ.ಡಿ (PD) ಖಾತೆಯಲ್ಲಿ ಒಟ್ಟು ರೂ. 545.485 ಲಕ್ಷ ಅನುದಾನ ಲಭ್ಯವಿದ್ದು, ಜಿಲ್ಲಾಧಿಕಾರಿಗಳ ಕಚೇರಿಯ ಪಿ.ಡಿ ಖಾತೆಯಲ್ಲಿ ಒಟ್ಟು ರೂ. 6118.65 ಲಕ್ಷ ಅನುದಾನ ಲಭ್ಯವಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು.