ಆರೋಗ್ಯ ಸಚಿವ ಯು.ಟಿ.ಖಾದರ್ ಬೆಂಗಾವಲು ವಾಹನಕ್ಕೆ ಸ್ಕೂಟಿ ಡಿಕ್ಕಿ, ಸವಾರ ಗಂಭೀರ..!

ಅಂಕೋಲಾ: ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಬೆಂಗಾವಲು ವಾಹನಕ್ಕೆ ಸ್ಕೂಟಿ ಡಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ತಾಲೂಕಿನ ವರದರಾಜ್ ಹೋಟೆಲ್ ಸಮೀಪ ನಡೆದಿದೆ.

ಕಾರವಾರದಿಂದ ಉಡುಪಿ ಕಡೆಗೆ ಆರೋಗ್ಯ ಸಚಿವರನ್ನು ಎಸ್ಕಾರ್ಟ್ ಮಾಡಿಕೊಂಡು ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಸ್ಕೂಟಿ ಸವಾರ, ಅಲಗೇರಿ ಮೂಲದ ಸಂದೀಪ್ ನಾಯ್ಕ ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನೆ ನಡೆದ ತಕ್ಷಣ ಸಚಿವ ಯು.ಟಿ. ಖಾದರ್ ಅವರು ವಾಹನ ನಿಲ್ಲಿಸಿ ಗಾಯಾಳುವಿನ ಆರೋಗ್ಯ ವಿಚಾರಿಸಿ, ಅವರನ್ನು ತಕ್ಷಣ ಅಂಕೋಲ ಪಟ್ಟಣದ ಆರ್ಯ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ದೊರಕುವಂತೆ ವ್ಯವಸ್ಥೆ ಮಾಡಿದರು.

ಗಾಯಾಳುಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಅಂಕೋಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ.