ಮುಂಡಗೋಡದಲ್ಲಿ ರಾಯಣ್ಣ ಮೂರ್ತಿ–ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ವಿವಾದ; ಸ್ಥಳಕ್ಕೆ ಶಾಸಕ ಶಿವರಾಮ ಹೆಬ್ಬಾರ್ ಭೇಟಿ..!

ಮುಂಡಗೋಡ: ಪಟ್ಟಣದ ಬಂಕಾಪುರ ರಸ್ತೆಯ ಆಂಜನೇಯ ದೇವಸ್ಥಾನದ ಸಮೀಪ ಸಂಗೊಳ್ಳಿ ರಾಯಣ್ಣ ಮೂರ್ತಿ ಹಾಗೂ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಉಂಟಾಗಿರುವ ವಿವಾದ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ. ವಿವಾದಿತ ಸ್ಥಳಕ್ಕೆ ಶಾಸಕ ಶಿವರಾಮ ಹೆಬ್ಬಾರ್ ಅವರು ಭಾನುವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಲೋಕೋಪಯೋಗಿ ಇಲಾಖೆಯ ರಸ್ತೆಗೆ ಹೊಂದಿಕೊಂಡಿರುವ ಖಾಲಿ ಜಾಗದಲ್ಲಿ ಕಳೆದ ಎರಡು ವರ್ಷಗಳಿಂದ ಹಿಂದೂ ಮಹಾಗಣಪತಿ ಪ್ರತಿಷ್ಠಾಪಿಸಿ ಅದ್ದೂರಿಯಾಗಿ ಗಣೇಶೋತ್ಸವ ಆಚರಿಸಲಾಗುತ್ತಿದೆ. ಇದೇ ಜಾಗದಲ್ಲಿ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪಿಸಲು ಕೆಲವರು ಮುಂದಾಗಿರುವುದೇ ಇದೀಗ ಜಾಗದ ವಿವಾದಕ್ಕೆ ಕಾರಣವಾಗಿದೆ.

ಒಂದೇ ಜಾಗ.. ಎರಡು ವಾದ..!
ರಾಯಣ್ಣನ ಮೂರ್ತಿ ಇದೇ ಸ್ಥಳದಲ್ಲಿ ಪ್ರತಿಷ್ಠಾಪಿಸಿದರೆ ಗಣೇಶೋತ್ಸವ ಸಂದರ್ಭದಲ್ಲಿ ಜಾಗದ ಕೊರತೆ ಉಂಟಾಗಲಿದೆ. ಹೀಗಾಗಿ ರಾಯಣ್ಣನ ಮೂರ್ತಿಗೆ ಬದಲಿ ಜಾಗ ಕಲ್ಪಿಸಿದರೆ ಹಿಂದೂ ಮಹಾಗಣಪತಿ ಸಮಿತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂಬುದು ಸಮಿತಿ ಸದಸ್ಯರ ವಾದ.

ಇನ್ನು ಮೂರ್ತಿ ಪ್ರತಿಷ್ಠಾಪಕರ ಪ್ರಕಾರ, ಇದೇ ಸ್ಥಳದಲ್ಲಿ ಈ ಹಿಂದೆ ಧ್ವಜ ಕಟ್ಟೆ ಇತ್ತು. ಅದನ್ನು ತೆರವುಗೊಳಿಸಿ ಗಣಪತಿ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿತ್ತು. ಇದೀಗ ಇದೇ ಸ್ಥಳದಲ್ಲಿ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪಿಸುವುದಾಗಿ ಅವರು ಪಟ್ಟು ಹಿಡಿದಿದ್ದಾರೆ.

ಸ್ಥಳಕ್ಕೆ ಶಾಸಕ ಹೆಬ್ಬಾರ್ ಭೇಟಿ..!
ವಿವಾದದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಶಿವರಾಮ ಹೆಬ್ಬಾರ್ ಅವರು ಪರಿಸ್ಥಿತಿಯನ್ನು ಪರಿಶೀಲಿಸಿ, ಎರಡೂ ಕಡೆಯವರ ಅಭಿಪ್ರಾಯಗಳನ್ನು ಆಲಿಸಿದರು.

“ಗಣೇಶ ಚತುರ್ಥಿ ಮುಗಿದ ಬಳಿಕ ಎರಡೂ ಕಡೆಯವರನ್ನು ಕರೆದು ಮಾತುಕತೆ ನಡೆಸಿ, ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಲಾಗುವುದು” ಎಂದು ಶಾಸಕ ಶಿವರಾಮ ಹೆಬ್ಬಾರ್ ಭರವಸೆ ನೀಡಿದ್ದಾರೆ.

ಶಾಸಕರ ಮಧ್ಯಸ್ಥಿಕೆಯಿಂದ ಇದೀಗ ಹಲವು ದಿನಗಳಿಂದ ಚರ್ಚೆಗೆ ಗ್ರಾಸವಾಗಿರುವ ಜಾಗದ ವಿವಾದಕ್ಕೆ ಶಾಂತಿಯುತ ಪರಿಹಾರ ಸಿಗುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.