ಟಿಬೇಟನ್ ಕಾಲೋನಿಯಲ್ಲಿ ಕಟ್ಟಡದಿಂದ ಬಿದ್ದು ಯುವ ಕಾರ್ಮಿಕ ದಾರುಣ ಸಾವು..! ಎರಡು ತಿಂಗಳಲ್ಲಿ ಎರಡು ಹೆಣ..! ಕಾರ್ಮಿಕರ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆ..!

ಮುಂಡಗೋಡ: ತಾಲೂಕಿನ ಟಿಬೇಟನ್ ಕಾಲೋನಿಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡದ ಮೇಲಿಂದ ಆಕಸ್ಮಿಕವಾಗಿ ಬಿದ್ದು ಯುವ ಕಟ್ಟಡ ಕಾರ್ಮಿಕನೊಬ್ಬ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತ ಯುವಕನನ್ನು ಬಸಾಪುರ ಗ್ರಾಮದ ಸಂದೇಶ ನಾಗರಾಜ ಚಲವಾದಿ (23) ಎಂದು ಗುರುತಿಸಲಾಗಿದೆ. ಲಾಮಾ ಕ್ಯಾಂಪ್ ನಂಬರ್-1ರಲ್ಲಿ ನಿರ್ಮಾಣ ಹಂತದಲ್ಲಿದ್ದ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕೆಳಗೆ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಘಟನೆಯ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಎರಡು ತಿಂಗಳಲ್ಲಿ ಎರಡು ಹೆಣ..!
ಟಿಬೇಟನ್ ಕಾಲೋನಿಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗಳು ನಿರಂತರವಾಗಿ ನಡೆಯುತ್ತಿವೆ. ನಿತ್ಯವೂ ನೂರಾರು ಕಟ್ಟಡ ಕಾರ್ಮಿಕರು ಇಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಕಾರ್ಮಿಕರ ಸುರಕ್ಷತೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆಯೇ ಎಂಬ ಪ್ರಶ್ನೆ ಇದೀಗ ಮತ್ತೆ ಎದುರಾಗಿದೆ. ಇದೇ ಟಿಬೇಟನ್ ಕಾಲೋನಿಯಲ್ಲಿ ಕಟ್ಟಡದ ಮೇಲಿಂದ ಬಿದ್ದು ಕಾರ್ಮಿಕನೊಬ್ಬ ಮೃತಪಟ್ಟಿರುವುದು ಇತ್ತೀಚಿನ ಅವಧಿಯಲ್ಲಿ ಎರಡನೇ ಪ್ರಕರಣ ಎನ್ನಲಾಗಿದ್ದು, ಕಾರ್ಮಿಕರ ಸುರಕ್ಷತೆ ಕುರಿತು ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳು ಗಂಭೀರವಾಗಿ ಗಮನ ಹರಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

ಬಹುಮಹಡಿ ಕಟ್ಟಡಗಳು.. ಸುರಕ್ಷತಾ ಕ್ರಮಗಳೇನು?
ಟಿಬೇಟನ್ ಕಾಲೋನಿಯಲ್ಲಿ ದಿನದಿಂದ ದಿನಕ್ಕೆ ಬಹುಮಹಡಿ ಕಟ್ಟಡಗಳು ತಲೆ ಎತ್ತುತ್ತಿವೆ. ಇಂತಹ ಕಟ್ಟಡಗಳ ನಿರ್ಮಾಣಕ್ಕೆ ಅಗತ್ಯ ಅನುಮತಿ, ಕಟ್ಟಡ ನಿರ್ಮಾಣ ನಿಯಮಗಳ ಪಾಲನೆ ಹಾಗೂ ಕಾರ್ಮಿಕರ ಸುರಕ್ಷತಾ ಕ್ರಮಗಳು ಸಮರ್ಪಕವಾಗಿ ಜಾರಿಯಾಗುತ್ತಿವೆಯೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಕಾರ್ಮಿಕರಿಗೆ ಸೇಫ್ಟಿ ಬೆಲ್ಟ್, ಹೆಲ್ಮೆಟ್, ಸುರಕ್ಷತಾ ಜಾಲ ಸೇರಿದಂತೆ ಅಗತ್ಯ ಸುರಕ್ಷತಾ ಪರಿಕರಗಳನ್ನು ಒದಗಿಸುವುದು ಅತ್ಯಗತ್ಯ. ಆದರೆ ಇವುಗಳ ಪಾಲನೆ ಕುರಿತು ಹಲವು ಆರೋಪಗಳು ಕೇಳಿಬರುತ್ತಿವೆ. ಬಡ ಕುಟುಂಬಗಳ ಆಧಾರವಾಗಿರುವ ಕಟ್ಟಡ ಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲವೇ? ಅನ್ನೋ ಪ್ರಶ್ನೆ ಎದ್ದಿದೆ.

ಮತ್ತೊಂದು ದುರ್ಘಟನೆ ಸಂಭವಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಟಿಬೇಟನ್ ಕಾಲೋನಿಯಲ್ಲಿನ ಕಟ್ಟಡ ಕಾಮಗಾರಿಗಳ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಬೇಕೆಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬರುತ್ತಿದೆ.