NMD ಜಮೀರ್ ಬರ್ಬರ ಹತ್ಯೆ ಕೇಸ್..! ಮತ್ತೋರ್ವ ಪ್ರಮುಖ ಆರೋಪಿ ಅರೆಸ್ಟ್..! ಕಾಜಗಾರ ಮಂಜುಗೆ ಕಂಟ್ರಿಮೇಡ್ ಪಿಸ್ತೂಲ್  ಸಪ್ಲೈ ಮಾಡಿದ್ದವ ಅಂದರ್..!

ಮುಂಡಗೋಡಿನ NMD ಜಮೀರ್ ಭೀಕರ ಹತ್ಯೆ ಕೇಸಲ್ಲಿ ಮತ್ತೋರ್ವ ಆರೋಪಿಯನ್ನು ಪೊಲೀಸ್ರು ಬಂಧಿಸಿದ್ದಾರೆ‌. ಆ ಬರ್ಬರ ಹತ್ಯೆಯಲ್ಲಿ ಬಳಸಲಾಗಿದ್ದ ಎರಡು ಕಂಟ್ರಿ ಮೇಡ್ ಪಿಸ್ತೂಲು ಪೂರೈಸಿದ್ದವ ಪೊಲೀಸರ ಕೈಯಲ್ಲಿ ಲಾಕ್ ಆಗಿದ್ದಾನೆ. ಆರೋಪಿಯನ್ನು ಉತ್ತರ ಪ್ರದೇಶ ಗೋರಖಪುರ‌ದಿಂದ ಬಂಧಿಸಿ ಕರೆತಂದಿದ್ದಾರೆ ಪೊಲೀಸ್ರು. ಅಂದಹಾಗೆ, ಸದ್ಯ NMD ಹತ್ಯೆ ಕೇಸಲ್ಲಿ ಅರೆಸ್ಟ್ ಆಗಿರೋ ಆರೋಪಿಗಳ ಸಂಖ್ಯೆ 12 ಕ್ಕೆ ಏರಿದೆ.

ಕೊಲೆಯಾದ NMD ಜಮೀರ್

ಅದು ಏಪ್ರಿಲ್ 24 ರ ಮಿಡ್ ನೈಟ್..!
ಯಸ್, ಅವತ್ತು ಶುಕ್ರವಾರ ಏಪ್ರಿಲ್ 24 ರ ರಾತ್ರಿ ಸರಿ ಸುಮಾರು 11 ಗಂಟೆಯ ಹೊತ್ತು. ಮುಂಡಗೋಡಿನ ಬಸ್ ಸ್ಟ್ಯಾಂಡ್ ಎದುರಿನ ಸಾವಜಿ ಹೊಟೆಲ್ ನಲ್ಲಿ ಮಟನ್ ಕೈಮಾ ಸವಿಯಲು ಹೋಗಿದ್ದ NMD ಜಮೀರ್ ಬರ್ಬರವಾಗಿ ಹತ್ಯೆಯಾಗಿದ್ದ. ಊಟಕ್ಕೆ ಅಂತಾ ಕುಳಿತಿದ್ದವನ ಕಣ್ಣಿಗೆ ಖಾರದ ಪುಡಿ ಎರಚಿ ಕೊಚ್ಚಿ ಹಾಕಲಾಗಿತ್ತು. ಆ ಹೊತ್ತಲ್ಲಿ ಗುಂಡಿನ ಸದ್ದೂ ಕೂಡ ಕೇಳಿತ್ತು. ನಂತ್ರ ಪೊಲೀಸ್ರು ಬಂಧಿಸಿರೋ ಆರೋಪಿಗಳ ಜೊತೆ ಜೊತೆಗೆ ಎರಡು ಕಂಟ್ರಿಮೇಡ್ ಪಿಸ್ತೂಲು ಹಾಗೂ 6 ಜೀವಂತ ಗುಂಡುಗಳೂ ಸಿಕ್ಕಿದ್ದವು.

ಆತನ ಹೆಸ್ರು “ರೂಹಾಬ್ ಅಲಿ”..!
ಅಂದಹಾಗೆ, ನಾವಿಲ್ಲಿ ಹೇಳ್ತಿರೋ ವ್ಯಕ್ತಿ, ದೂರದ ಉತ್ತರ ಪ್ರದೇಶ ನಿವಾಸಿ, ಹೆಸ್ರು, ರೂಹಾಬ್ ಅಲಿ ಅಂತಾ.. ಅಸಲಿಗೆ ಈತ ಕ್ರೈಮುಗಳ ಸರದಾರ ಅನಿಸತ್ತೆ‌. ಯಾಕಂದ್ರೆ ಈ ರಕ್ಕಸನ ಮೈತುಂಬ ಕೇಸುಗಳಿವೆ. ಮರ್ಡರು, ರಾಬರಿ, ಅಕ್ರಮ ಶಸ್ತ್ರಾಸ್ತ್ರ ಕೇಸು ಸೇರಿದಂತೆ ಬರೋಬ್ಬರಿ 10 ಕೇಸುಗಳಿವೆ. ಹೀಗಾಗಿ, ಯೋಗಿ ರಾಜ್ಯದ ಗೋರಖಪುರದ ಲಾಡ್ಜಿನಲ್ಲಿ ಅಡಗಿ ಕುಳಿತಿದ್ದವನನ್ನ ಪೊಲೀಸ್ರು ಹೆಡೆಮುರಿಕಟ್ಟಿದ್ದಾರೆ.

ಆರೋಪಿ ಮಂಜು ಕಾಜಗಾರ

ಈತನೇ ಪಿಸ್ತೂಲ್ ಕೊಟ್ಟಿದ್ದ..!
ಅಸಲು, NMD ಮರ್ಡರ್ ಕೇಸಿನ ಪ್ರಮುಖ ಆರೋಪಿ ಮಂಜು ಕಾಜಗಾರ, 2024 ರಲ್ಲೇ ಈ ರೂಹಾಬ್ ಅಲಿಯನ್ನ ಸಂಪರ್ಕಿಸಿದ್ದ. ಜೈಲಿನಲ್ಲೇ ಪರಿಚಯವಾಗಿದ್ದ ಬಿಹಾರಿಯೊಬ್ಬನ ಇಶಾರೆಯಿಂದಲೇ, ರೂಹಾಬ್ ಅಲಿಯ ಖಾರಸ್ಥಾನಕ್ಕೆ ತೆರಳಿದ್ದ ಮಂಜು ಕಾಜಗಾರ್, 2024 ರಲ್ಲೇ, ಅಂದ್ರೆ ಎರಡು ವರ್ಷಗಳ ಹಿಂದೆಯೇ ಆತನಿಂದ ಎರಡು ಕಂಟ್ರಿಮೇಡ್ ಪಿಸ್ತೂಲ್ ಖರೀದಿಸಿ ತಂದಿದ್ದ. ಅದೇ ಪಿಸ್ತೂಲ್ NMD ಜಮೀರನ ಬರ್ಬರ ಹತ್ಯೆಯ ಸ್ಕೆಚ್ ಹಾಕಲು “ಬಲ” ತುಂಬಿದ್ದವು.

ಪೊಲೀಸ್ರ ಚಾಣಾಕ್ಷ ಬೇಟೆ..!
ಹಾಗೆ ನೋಡಿದ್ರೆ, NMD ಜಮೀರನ ಹತ್ಯೆ ನಡೆದ ಗಳಿಗೆಯಿಂದಲೇ, ಫುಲ್ ಫಿಲ್ಡಿಗೆ ಇಳಿದಿದ್ದ ಖಾಕಿ ಪಡೆಯ ಚಾಣಾಕ್ಷ ಟೀಂ, ಘಟನೆ ನಡೆದಿದ್ದ ಕೆಲವೇ ಗಂಟೆಗಳಲ್ಲಿ ಪ್ರಮುಖ ಆರೋಪಿಗಳನ್ನ ಎಳೆದು ತಂದಿದ್ದರು. ಆ ನಂತರದಲ್ಲಿ ನಿರಂತರ ಅಲರ್ಟ್ ಆಗಿದ್ದ ಪೊಲೀಸ್ರು ಈ ವರೆಗೆ ಕೇಸಿಗೆ ಸಂಬಂಧಿಸಿ ಬರೋಬ್ಬರಿ 11 ಜನರನ್ನ ಬಂಧಿಸಿದ್ದರು. ಆದ್ರೆ, ಪಿಸ್ತೂಲ್ ಪೂರೈಸಿದ್ದ ಖದೀಮನ ಸುಳಿವು ಮಾತ್ರ ಪೊಲೀಸರಿಗೆ ಸಿಕ್ಕಿರಲಿಲ್ಲ.

ಜಿದ್ದಿಗೆ “ತಯಾರಿ”..!
ಸ್ನೇಹಿತರೇ, NMD ಜಮೀರನ ಕತೆ ಮುಗಿಸಲೇಬೇಕು ಅಂತ ಜಿದ್ದಿಗೆ ಬಿದ್ದಿದ್ದ, ಮಂಜು ಕಾಜಗಾರ ಹತ್ಯೆಗೆ ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದ. ಆ ಹೊತ್ತಲ್ಲಿ ಮಂಜು ಕಾಜಗಾರಗೆ ನೆನಪಾಗಿದ್ದವನ ಹೆಸರು “ದಿಲ್ ರಾಜ್”..!

ಆತನ ಹೆಸ್ರು ದಿಲ್ ರಾಜ್..!
ಈಗ್ಗೆ 5-6 ವರ್ಷಗಳ ಹಿಂದೆ ಸಿದ್ದಾಪುರ ತಾಲೂಕಿನಲ್ಲಿ 302 ಕೇಸೊಂದರಲ್ಲಿ ಆರೋಪಿಯಾಗಿ, ಶಿಕ್ಷೆಗೂ ಗುರಿಯಾಗಿದ್ದವನು, ಮೊದ ಮೊದಲು ಸಿದ್ದಾಪುರ ಠಾಣೆಯಿಂದ ಕೇಸು ಜಡಿಸಿಕೊಂಡು ಶಿರಸಿ ಜೈಲಿನಲ್ಲಿದ್ದಾಗಲೇ ಮಂಜು ಕಾಜಗಾರ್ ಗೆ ಪರಿಚಯವಾಗಿದ್ದ. ಅಂದಹಾಗೆ ಆಯನ ಹೆಸ್ರು ದಿಲರಾಜ್.. ನಂತ್ರ 302 ಪ್ರಕರಣದಲ್ಲಿ ಶಿಕ್ಷೆ ವಿಧಿಸಿದಾಗ, ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಫಿಕ್ಸ್ ಆಗಿದ್ದ. ಆ ಹೊತ್ತಲ್ಲಿ ಈತನಿಗೆ ಬೇಲ್ ಕೊಡಿಸಲು ಸಹಾಯ ಮಾಡಿದ್ದು ಮತ್ತದೇ ಮಂಜು ಕಾಜಗಾರ್.. ಹೀಗಾಗಿ, ಇವರಿಬ್ಬರ ನಡುವೆ ಒಂದಿಷ್ಟು ಅನ್ಯೋನ್ಯತೆ ಏರ್ಪಟ್ಟಿತ್ತು. ಈ ಕಾರಣಕ್ಕಾಗೇ NMD ಹತ್ಯೆಗೆ ಆತನಿಗೇ ಸುಪಾರಿ ನೀಡೋಕೆ ಪ್ಲ್ಯಾನ್ ಹಾಕಿದ್ದ.

ಸುಪಾರಿ ಪಡೆಯಲಿಲ್ಲ..!
ಅಸಲು, ಶಿರಸಿ ಜೈಲಿನಿಂದ ಶುರುವಾಗಿದ್ದ ಮಂಜು ಹಾಗೂ ದಿಲ್ ರಾಜ್ ಸ್ನೇಹ, ಬೆಳಗಾವಿಯ ಹಿಂಡಲಗಾ ಜೈಲಿನಿಂದ ದಿಲ್ ರಾಜ್ ನನ್ನು ಹೊರತರುವಲ್ಲಿ ಪ್ರಮುಖ ಪಾತ್ರ ವಹಿಸಿ ಸ್ನೇಹವನ್ನ ಮತ್ತಷ್ಟು ಪಟ್ಟಿ ಗೊಳಿಸಿ ಕೊಂಡಿದ್ದ. ಈ ಕಾರಣಕ್ಕಾಗೇ NMD ಹತ್ಯೆಗೆ ಮೊದ ಮೊದಲು ದಿಲ್ ರಾಜ್ ಗೆ ಸುಫಾರಿ ನೀಡಲಾಗಿತ್ತಂತೆ. ಆದ್ರೆ ಅದ್ಯಾವ ಕಾರಣಕ್ಕೋ ಗೊತ್ತಿಲ್ಲ, ದಿಲ್ ರಾಜ್ NMD ಜಮೀರ್ ನ ಹತ್ಯೆ ಮಾಡಲು ಒಪ್ಪಲೇ ಇಲ್ಲ. ಆದ್ರೆ, ಕಂಟ್ರಿಮೇಡ್ ಪಿಸ್ತೂಲ್ ಗಳು ಸಿಗುವ ಅಡ್ಡೆಗಳ‌ ಮಾಹಿತಿ ನೀಡಿದ್ದ. ಹೀಗಾಗಿ ಎರಡು ಕಂಟ್ರಿಮೇಡ್ ಪಿಸ್ತೂಲ್ ಗಳು ಆರೋಪಿಗಳ ಕೈಸೇರಿದ್ದವು. ಇದನ್ನೇಲ್ಲ ಪೊಲೀಸ್ರಿಗೆ ತನಿಖೆ ವೇಳೆ ಒದರಿಕೊಂಡಿದ್ದ ದಿಲ್ ರಾಜ್..!

ಯೂಪಿ ದಾರಿ..!
NMD ಜಮೀರನ ಹತ್ಯೆ ಕೇಸಲ್ಲಿ, ಕಂಟ್ರಿಮೇಡ್ ಪಿಸ್ತೂಲ್ ಆರೋಪಿಗಳ ಕೈಗೆ ಹೇಗೆ ಬಂತು ಅಂತಾ ತನಿಖೆ ನಡೆಸಿದ್ದ ಪೊಲೀಸ್ರಿಗೆ ಉತ್ತರ ಪ್ರದೇಶದ ಮಾರ್ಗ ತೋರಿಸಿದ್ದರು ಆರೋಪಿಗಳು. ಈ ಕಾರಣಕ್ಕಾಗೆ ಪೊಲೀಸರ ತಂಡ ಯೂಪಿಯ ಪ್ಲೈಟ್ ಹತ್ತಿ ಕಂಟ್ರಿ ಮೇಡ್ ಪಿಸ್ತೂಲ್ ಸಪ್ಲೈ ಮಾಡಿದ್ದ ಖದೀಮನನ್ನು ಎತ್ತಾಕೊಂಡು ಬಂದಿದೆ. ಈ ಮೂಲಕ ಇಡೀ ಮುಂಡಗೋಡನ್ನೇ ಬೆಚ್ಚಿ ಬೀಳಿಸಿದ್ದ NMD ಜಮೀರನ ಹತ್ಯೆ ಕೇಸಲ್ಲಿ 12 ನೇ ಆರೋಪಿ ಜಮಾ ಆದಂತಾಗಿದೆ.

ಉತ್ತರ ಕನ್ನಡ ಎಸ್ಪಿ ದೀಪನ್ ಎಂ.ಎನ್., ಶಿರಸಿ ಡಿವೈಎಸ್ಪಿ ಶ್ರೀಮತಿ ಗೀತಾ ಪಾಟೀಲ್ ಮಾರ್ಗದರ್ಶನದಲ್ಲಿ, ಮುಂಡಗೋಡ ಪಿಐ ರಮೆಶ್ ಹನಾಪುರ ನೇತೃತ್ವದಲ್ಲಿ, ಪಿಎಸ್ಐ ಸಿದ್ದು ಗುಡಿ, ಬನವಾಸಿ ಪಿಎಸ್ ಐ ರವೀಂದ್ರ ಬಿರಾದಾರ್, ಸಿಬ್ಬಂದಿಗಳಾದ ಕೋಟೇಶ್ ನಾಗರೊಳ್ಳಿ, ಬಸವರಾಜ್ ಹಗರಿ, ಅನ್ವರಖಾನ್, ಸದ್ದಾಂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.