ಮುಂಡಗೋಡ ತಾಲೂಕು ಕಾತೂರಿನ ಆಲಳ್ಳಿ ರಸ್ತೆ ಪಕ್ಕದಲ್ಲಿ ಗಿಡಕ್ಕೆ ನೇಣು ಬಿಗಿದುಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೃತನನ್ನು ನಂದಿಪುರ ಗ್ರಾಮದ ಮಾರುತಿ ಕರಿಯಪ್ಪ ತಳವಾರ (26) ಎಂದು ಗುರುತಿಸಲಾಗಿದೆ. ಘಟನೆ ನಿನ್ನೆ ಸಂಜೆ ನಡೆದಿದ್ದು, ಮಾರುತಿ ಕಾತೂರಿಗೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
‘ಕಾತೂರಿಗೆ ಹೋಗಿ ಬರ್ತೀನಿ’ ಎಂದು ಮನೆಯಿಂದ ಹೊರಟಿದ್ದ ಮಾರುತಿ, ಬಳಿಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಈ ಸುದ್ದಿ ತಿಳಿದು ಕುಟುಂಬಸ್ಥರು ಹಾಗೂ ಸ್ಥಳೀಯರು ಆಘಾತಕ್ಕೊಳಗಾಗಿದ್ದಾರೆ.
ಮಾರುತಿ ಉಡುಪಿಯ ಫೈವ್‌ಸ್ಟಾರ್ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ನಿನ್ನೆಯಷ್ಟೇ ಊರಿಗೆ ಬಂದಿದ್ದ ಎನ್ನಲಾಗಿದೆ.
ಬೆಳಗ್ಗೆಯಿಂದ ಪತ್ನಿಯೊಂದಿಗೆ ಮಳಗಿ ಜಲಾಶಯಕ್ಕೆ ತೆರಳಿ ಸಮಯ ಕಳೆದಿದ್ದ ಮಾರುತಿ, ಬಳಿಕ ಖುಷಿಖುಷಿಯಾಗಿಯೇ ‘ಚಿಕನ್ ತರ್ತೀನಿ’ ಎಂದು ಹೇಳಿ ಕಾತೂರಿಗೆ ತೆರಳಿದ್ದ ಎನ್ನಲಾಗಿದೆ. ಆದರೆ ಕೆಲವೇ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಕುಟುಂಬಕ್ಕೆ ಬರಸಿಡಿಲಿನಂತೆ ಎರಗಿದೆ.
ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ.
ಘಟನೆಯು ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.
