ಮುಂಡಗೋಡ ಪಟ್ಟಣದಲ್ಲಿ ಶನಿವಾರ ಹಾಡಹಗಲೇ ಮತ್ತೊಂದು ಕಳ್ಳತನವಾಗಿದೆ. ಬಹುತೇಕ ಪೊಲೀಸ ಠಾಣೆಯ ರೂಟ್ ನಲ್ಲೇ ಅಂದ್ರೆ ಪಟ್ಟಣದ ಬಂಕಾಪುರ ರಸ್ತೆಯ ಜನನೀಬೀಡ ಪ್ರದೇಶದಲ್ಲೇ ಕಳ್ಳರು ಕೈಚಳಕ ತೋರಿದ್ದಾರೆ. ಸಿಮೆಂಟ್, ಕಬ್ಬಿಣದ ಅಂಗಡಿಗೆ ನುಗ್ಗಿರೋ ಕಳ್ಳರು 13 ಸಾವಿರಕ್ಕೂ ಹೆಚ್ಚು ಹಣ ಎಗರಿಸಿದ್ದಾರೆ. ಇದ್ರೊಂದಿಗೆ ತಾಲೂಕಿನಲ್ಲಿನ ಸರಣೀ ಕಳ್ಳತನ ಕೇಸುಗಳು ನಿರಂತರ ಎನ್ನುವಂತಾಗಿದೆ. ಎಂದಿನಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಅದು, ಇದು ಅಂತಾ ಗೆಬರಾಡಿ ಹೋಗಿದ್ದಾರೆ, ಅಷ್ಟೆ, ಆದ್ರೆ ಆ ಕಳ್ಳರು ಮಾತ್ರ ಈ ನಮ್ಮ‌ಪೊಲೀಸ್ರಿಗೆ ಯಾವಾಗ ಸಿಗ್ತಾರೋ ಗೊತ್ತಿಲ್ಲ..

ಇದೇಲ್ಲ ಸಿರೀಯಸ್ ಅಲ್ವಾ..?
ನಿಜವೆಂದ್ರೆ, ಮುಂಡಗೋಡ ತಾಲೂಕಿನ ಜನತೆ ಅಕ್ಷರಶಃ ಆತಂಕದಲ್ಲಿದೆ. ತಾಲೂಕಿನ ಗ್ರಾಮೀಣ ಭಾಗದಲ್ಲಂತೂ ಮಹಿಳೆಯರು ರಾತ್ರಿಯಾದಂತೆ ಏನಾಗತ್ತೊ ಅನ್ನೋ ಭಯದಲ್ಲಿದ್ದಾರೆ. ಯಾಕಂದ್ರೆ, ಮುಂಡಗೋಡ ಪಟ್ಟಣ ಸೇರಿ ತಾಲೂಕಿನೆಲ್ಲೆಡೆ ಸದ್ಯ ಕಳ್ಳರ ಹಾವಳಿ ಜನರ ನಿದ್ದೆಗೆಡಿಸಿದೆ. ಅದ್ರೆ ಮುಂಡಗೋಡ ಪೊಲೀಸ್ ಅಧಿಕಾರಿಗಳು ಮಾತ್ರ ಈ ಬಗ್ಗೆ ಬಹುಶಃ ಇನ್ನೂ ಸಿರಿಯಸ್ ಆಗಿ ತಕ್ಕೊಂಡೇ ಇಲ್ಲವಾ..? ಅಥವಾ ಹೋಗ್ಲಿ ಬಿಡ್ರಿ ಮುಂದೆ ನೋಡಿದ್ರಾಯ್ತು ಅಂತಾ ನಮ್ಮ ಖಡಕ್ ಸಾಹೇಬ್ರುಗಳು ಗಪ್ ಚುಪ್ ಆಗಿದ್ದಾರಾ..? ಅರ್ಥವೇ ಆಗ್ತಿಲ್ಲ.. ಹಿಂಗಾಗಿ, ಎಸ್ಪಿ ಸಾಹೇಬ್ರೆ ನೀವಾದ್ರೂ ಒಮ್ಮೆ ನಮ್ಮ ಮುಂಡಗೋಡ ಕಡೆಗೆ ಗಮನ ಕೊಡ್ರಿ ಅಂತಿದಾರೆ ಜನ..!

ಹಾಡಹಗಲೇ ಕಳ್ಳತನ..!
ಅಸಲು, ಮೊನ್ನೆಯಷ್ಟೇ ಮುಂಡಗೋಡ ಪಟ್ಟಣದ ಹಳೂರಿನ ಮಾರಿಕಾಂಬಾ ನಗರದಲ್ಲಿ ಸರಣೀ ಕಳ್ಳತನವಾಗಿತ್ತು. ಅಲ್ಲಿ ಕಳ್ಳತನಕ್ಕೆ ಬಂದಿದ್ದ ಕಳ್ಳರು ಕಳ್ಳತನ ಮಾಡಿದ ಮನೆಯಲ್ಲೇ ಟೀ ಮಾಡಿಕೊಂಡು ಕುಡಿದು ಹೋಗಿದ್ರು. ಆ ಘಟನೆ ಒಂಥರಾ ನಮ್ಮ ಮುಂಡಗೋಡಿನ ಹೆಮ್ಮೆಯ ಪೊಲೀಸ್ ಅಧಿಕಾರಿಗಳನ್ನು ಗೇಲಿ ಮಾಡಿದಂತಾಗಿತ್ತು. ಆ ನಂತ್ರ ಹುನಗುಂದದಲ್ಲಿ ಮನೆಯ ಹೆಂಚು ತೆಗೆದು ಕಳ್ಳತನಕ್ಕೆ ವಿಫಲ ಯತ್ನ ನಡೆದಿತ್ತು. ಅದ್ರಂತೆ ಇವತ್ತೂ ಕೂಡ ಹಾಡಹಗಲೇ, ಪಟ್ಟಣದ ಬಂಕಾಪುರ ರಸ್ತೆಯ ಸಿಮೆಂಟ್ ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳರು ಯಾರ ಭಯವೂ ಇಲ್ಲದೇ ಏನಿಲ್ಲವೆಂದರೂ 13 ಸಾವಿರ ರೂಪಾಯಿ ಹಣ ಎಗರಿಸಿಕೊಂಡು ಹೋಗಿದ್ದಾರೆ. ಇದರ ಹೊರತಾಗಿ ಘಟನೆ ನಡೆದರೂ ಒಳಗೊಳಗೇ ಅದುಮಿಟ್ಟುಕೊಂಡಿರೋ ಕೇಸುಗಳು ಇನ್ನೆಷ್ಟೋ ಗೊತ್ತಿಲ್ಲ.

ಸಾಹೇಬ್ರೇ ಗಮನಿಸಿ..!
ಉತ್ತರ ಕನ್ನಡದಲ್ಲಿ ಸದ್ಯ ಸದ್ದಿಲ್ಲದೇ ಹಲವು ಅಕ್ರಮಿಗಳಿಗೆ ಲಗಾಮು ಹಾಕಿರೋ ಎಸ್ಪಿ ದೀಪನ್ ಎಂ.ಎನ್ ಸಾಹೇಬ್ರು ಮುಂಡಗೋಡ ಕಡೆ ಒಂದಿಷ್ಟು ಗಮನಿಸಬೇಕಿದೆ. ಇಲ್ಲಿನ ಅಕ್ರಮ ದಂಧೆಗಳು, ಅಕ್ರಮ ಚಟುವಟಿಕೆಗಳ ಬಗ್ಗೆ ಜನ ಏನೂ ಕೇಳುತ್ತಿಲ್ಲ. ಆದ್ರೆ, ತಾಲೂಕಿನಲ್ಲಿ ಸದ್ಯ ನಡೀತಿರೊ ಸರಣೀ ಕಳ್ಳತನಗಳನ್ನು ನಿಲ್ಲಿಸಿ‌. ಜನರು ನೆಮ್ಮದಿಯಿಂದ ನಿದ್ದೆ ಮಾಡುವಂತ ಪರಿಸರ ರೂಪಿಸಿಕೊಡಿ ಅನ್ನೋದಷ್ಟೇ ಸಮಸ್ತ ಮುಂಡಗೋಡ ತಾಲೂಕಿಗರ ಆತಂಕದ ಹಂಬಲ..!