ಸಾಲಬಾಧೆ ತಾಳಲಾರದೇ ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮದ ರೈತನೋರ್ವ ತನ್ನ ಗದ್ದೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಫಕ್ಕೀರಗೌಡ ಬಸನಗೌಡ ಪಾಟೀಲ್ (42) ಎಂಬುವ ರೈತನೇ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಗದ್ದೆಯಲ್ಲೇ ಆತ್ಮಹತ್ಯೆ..!
ಎರಡು ಎಕರೆ ಜಮೀನು ಹೊಂದಿದ್ದ ರೈತ ಸ್ಥಳೀಯ ಸಹಕಾರಿ ಸಂಘ, ಗ್ರಾಮೀಣ ಬ್ಯಾಂಕ್ ಸೇರಿ ಹಲವು ಖಾಸಗಿ ಫೈನಾನ್ಸ್ ಗಳಲ್ಲಿ ಸುಮಾರು 12 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಪ್ರಸಕ್ತ ವರ್ಷದಲ್ಲಿ ಮಳೆ ಕೈಕೊಟ್ಟು ಬರದ ಛಾಯೆ ಆವರಿಸಿರುವ ಹಿನ್ನೆಲೆಯಲ್ಲಿ, ಸಾಲ ತೀರಿಸಲು ಸಾಧ್ಯವಾಗದ ಭಯದಲ್ಲಿ ಮನನೊಂದು ಗದ್ದೆಯಲ್ಲೇ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆಳಿಗ್ಗೆ ಪ್ರಕರಣ ಬೆಳಕಿಗೆ..!
ಮನೆಯಿಂದ ನಿನ್ನೆ ಸೋಮವಾರ ಬೆಳಿಗ್ಗೆ ಗದ್ದೆಗೆ ಹೋಗಿದ್ದವ ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಹೀಗಾಗಿ, ಇಂದು ಬೆಳಗಿನ ಜಾವ ಕುಟುಂಬಸ್ಥರು ಹುಡುಕಾಡಿದಾಗ, ಗದ್ದೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ವಿಷ ಕುಡಿದು ಸಾವನ್ನಪ್ಪಿದ್ದಾನೆ ಅಂತಾ ತಿಳಿದು ಬಂದಿದೆ.

ಎರಡು ಮಕ್ಕಳು..!
ಇನ್ನು ಮೃತ ಫಕ್ಕೀರಗೌಡನಿಗೆ ಒಂದು ಹೆಣ್ಣು, ಒಂದು ಗಂಡು ಸೇರಿ ಎರಡು ಮಕ್ಕಳಿದ್ದು ರೈತ ತಂದೆಯ ಆತ್ಮಹತ್ಯೆಯಿಂದ ಮಕ್ಕಳು ಅನಾಥರಾಗಿದ್ದಾರೆ. ತಕ್ಷಣವೇ ಸರ್ಕಾರ ಮೃತ ರೈತನ ಕುಟುಂಬಕ್ಕೆ ಪರಿಹಾರ ನೀಡಬೇಕು ಅಂತಾ ಗ್ರಾಮಸ್ಥರ ಆಗ್ರಹವಾಗಿದೆ.
ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
