ಯಲ್ಲಾಪುರ ರಸ್ತೆ ದುರಂತ; ಅಪಘಾತ ಸ್ಥಳಕ್ಕೆ ಡಿಸಿ ಲಕ್ಷ್ಮೀಪ್ರಿಯಾ, ಎಸ್ಪಿ ದೀಪನ್ ಎಂ.ಎನ್ ಸೇರಿದಂತೆ ಉನ್ನತಾಧಿಕಾರಿಗಳ ತಂಡ ಭೇಟಿ..!


ಯಲ್ಲಾಪುರ: ತಾಲೂಕಿನ ಅರತಿಬೈಲ್ ಘಾಟ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದ ಸ್ಥಳಕ್ಕೆ ಉತ್ತರ ಕನ್ನಡ ಜಿಲ್ಲೆಯ ಉನ್ನತಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

​ಜಿಲ್ಲಾಧಿಕಾರಿ (ಡಿಸಿ) ಲಕ್ಷ್ಮೀಪ್ರಿಯಾ, ಜಿಲ್ಲಾ ಪೊಲೀಸ್ ಅಧೀಕ್ಷಕ (ಎಸ್ಪಿ) ದೀಪನ್ ಎಂ.ಎನ್., ಹಾಗೂ ಶಿರಸಿ ಉಪವಿಭಾಗದ ಡಿವೈಎಸ್ಪಿ ಶ್ರೀಮತಿ ಗೀತಾ ಪಾಟೀಲ್ ಸೇರಿದಂತೆ ಪ್ರಮುಖ ಅಧಿಕಾರಿಗಳ ತಂಡ ಘಟನಾ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತ್ತಿರದಿಂದ ಅವಲೋಕಿಸಿದೆ.

​ಪ್ರವಾಸಕ್ಕೆ ಹೊರಟಿದ್ದವರು ಮಸಣಕ್ಕೆ.!
​ಧಾರವಾಡ ಮೂಲದ 9 ಜನರ ತಂಡವೊಂದು ಕ್ರೂಸರ್ ವಾಹನದಲ್ಲಿ ಪ್ರವಾಸಕ್ಕೆಂದು ಹೊರಟಿತ್ತು. ಆದರೆ, ಯಲ್ಲಾಪುರದ ಅರತಿ ಘಾಟ್ ಬಳಿ ಬರುತ್ತಿದ್ದಂತೆಯೇ ಎದುರಿನಿಂದ ಬಂದ ಲಾರಿಯೊಂದಿಗೆ ಇವರ ವಾಹನವು ಭೀಕರವಾಗಿ ಮುಖಾಮುಖಿ ಡಿಕ್ಕಿಯಾಗಿದೆ.

​ಸ್ಥಳದಲ್ಲೇ ಆರು ಮಂದಿ ದುರ್ಮರಣ..!
​ಡಿಕ್ಕಿಯ ತೀವ್ರತೆ ಎಷ್ಟಿತ್ತೆಂದರೆ ಕ್ರೂಸರ್ ವಾಹನದಲ್ಲಿದ್ದ 9 ಜನರ ಪೈಕಿ 6 ಜನ ಸ್ಥಳದಲ್ಲೇ ಅತ್ಯಂತ ದುರಂತವಾಗಿ ಕೊನೆಯುಸಿರೆಳೆದಿದ್ದಾರೆ. ಉಳಿದ ಮೂವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

​ಅಪಘಾತ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಮತ್ತು ಗಾಯಾಳುಗಳಿಗೆ ಸೂಕ್ತ ತುರ್ತು ವೈದ್ಯಕೀಯ ನೆರವು ಒದಗಿಸಲು ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ. ಈ ಭೀಕರ ದುರಂತಕ್ಕೆ ಸಂಬಂಧಿಸಿದಂತೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಪ್ರಮುಖ ಸುದ್ದಿ ಯಲ್ಲಾಪುರದ ಆರತಿಬೈಲ್ ಘಟ್ಟದಲ್ಲಿ ಭೀಕರ ರಸ್ತೆ ಅಪಘಾತ; ಆರು ಮಂದಿ ಸ್ಥಳದಲ್ಲೇ ಸಾವು, ಮೂವರಿಗೆ ಗಂಭೀರ ಗಾಯ..!