ಗಾಂಜಾ ಸಾಗಾಟ ಮತ್ತು ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ; 272 ಗ್ರಾಂ ಗಾಂಜಾ ವಶ..!

ಶಿರಸಿ ನಗರದಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮತ್ತು ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಶಿರಸಿ ಹೊಸ ಮಾರುಕಟ್ಟೆ ಠಾಣೆಯ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
​ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಅಕ್ಕಿಆಲೂರು ನಿವಾಸಿ, ಸದ್ಯ ಸೆಂಟ್ರಿಂಗ್ ಕೆಲಸ ಮಾಡಿಕೊಂಡಿರುವ ಸೈಯದ್ ಸಾದಿಕ್ ತಂದೆ ಮುಜೀಬು (27) ಬಂಧಿತ ಆರೋಪಿಯಾಗಿದ್ದಾನೆ.

​ದಿನಾಂಕ ಜುಲೈ 08 ರಂದು ರಾತ್ರಿ ಸುಮಾರು ಶಿರಸಿ ನಗರದ ಶಿರಸಿ-ಯಲ್ಲಾಪುರ ರಸ್ತೆಯ ಅರಣ್ಯ ನೌಕರರ ಸಮುದಾಯ ಭವನದ ಹತ್ತಿರ ಗಾಂಜಾ ಸಾಗಾಟ ಮಾಡಿ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಈ ಮಾಹಿತಿಯ ಆಧಾರದ ಮೇಲೆ ಶಿರಸಿ ಹೊಸ ಮಾರುಕಟ್ಟೆ ಠಾಣೆಯ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿ ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ.
ಬಂಧಿತನಿಂದ ಸುಮಾರು 15 ಸಾವಿರ ರೂ. ಮೌಲ್ಯದ 272 ಗ್ರಾಂ ಗಾಂಜಾ ಮಾದಕ ವಸ್ತು ಹಾಗೂ ಕೃತ್ಯಕ್ಕೆ ಬಳಸಿದ ಪಲ್ಸರ್ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

​ಕಾರ್ಯಾಚರಣೆ ತಂಡ..!
​ಉತ್ತರ ಕನ್ನಡ ಎಸ್ಪಿ ದೀಪನ್ ಎಮ್.ಎನ್ ಹೆಚ್ಚುವರ ಎಸ್ಪಿ ಕೃಷ್ಣಮೂರ್ತಿ ಹಾಗೂ ಶಿರಸಿ ಡಿವೈಎಸ್ಪಿ ಶ್ರೀಮತಿ ಗೀತಾ ಪಾಟೀಲ್ ಮತ್ತು ಶಿರಸಿ ಸಿಪಿಐ ಸಂಪತ್‌ಕುಮಾರ್ ಸಿ. ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.

​ಹೊಸಮಾರುಕಟ್ಟೆ ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜ್ ಕರಶೆಟ್ಟಿ ಹಾಗೂ ಗೀತಾ ಜಿ. ಕಲಘಟಗಿ ಅವರ ನೇತೃತ್ವದಲ್ಲಿ, ಅಪರಾಧ ವಿಭಾಗದ ಸಿಬ್ಬಂದಿಗಳಾದ ಕೋಟೇಶ್ ನಾಗರೊಳ್ಳಿ, ಸಂದೀಪ್ ನಿಂಬಾಳ್ಕರ್, ರಾಕೇಶ್ ಎನ್. ಹೆಚ್., ಮಂಜುನಾಥ್ ಕೆ., ಅಶೋಕ್ ಹರಿಕಂತ್ರ, ಸಂತೋಷ್ ಆರ್. ಕೆ., ಲಕ್ಷ್ಮಣ್ ನಾಯಕ್ ಮತ್ತು ಚಾಲಕ ಹನುಮಂತ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.