ಮುಂಡಗೋಡ: ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೊಪ್ಪ ಗ್ರಾಮದ ಸೊಸೈಟಿ ಗೋಡೌನ್ ಆವರಣದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜವನ್ನು ಉಲ್ಟಾ ಹಾರಿಸಿದ್ದಾರೆ. ಇದು ಒಂದು ಕ್ಷಣ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಆತಂಕಕ್ಕೂ ಕಾರಣವಾಗಿತ್ತು.

ಇಂದೂರು ಸೊಸೈಟಿ ಮುಂದಾಳತ್ವದಲ್ಲಿ..!
ಅಂದಹಾಗೆ, ಇಂದೂರು ಸೊಸೈಟಿ ಆಡಳಿತದ ನೇತೃತ್ವದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ತ್ರಿವರ್ಣ ಧ್ವಜದ ಕೇಸರಿ ಬಣ್ಣ ಕೆಳಭಾಗದಲ್ಲಿದ್ದು, ಹಸಿರು ಬಣ್ಣ ಮೇಲ್ಭಾಗದಲ್ಲಿ ಕಾಣಿಸಿಕೊಂಡಿದೆ. ಈ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ಇದು ನಿರ್ಲಕ್ಷವಲ್ಲವಾ..?
ಸ್ವಾತಂತ್ರ್ಯೋತ್ಸವದಂತಹ ಮಹತ್ವದ ರಾಷ್ಟ್ರೀಯ ದಿನದಂದು ರಾಷ್ಟ್ರಧ್ವಜಕ್ಕೆ ಸೂಕ್ತ ಗೌರವ ನೀಡುವುದು ಪ್ರತಿಯೊಬ್ಬರ ಕರ್ತವ್ಯ. ಆದರೆ ಸೊಸೈಟಿ ಆಡಳಿತದ ನೇತೃತ್ವದಲ್ಲೇ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜವನ್ನು ಸರಿಯಾದ ರೀತಿಯಲ್ಲಿ ಹಾರಿಸದೇ ಇರುವುದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಧ್ವಜಾರೋಹಣಕ್ಕೂ ಮುನ್ನ ರಾಷ್ಟ್ರಧ್ವಜದ ಸರಿಯಾದ ಅಳವಡಿಕೆ ಹಾಗೂ ಧ್ವಜ ಸಂಹಿತೆ ಪರಿಶೀಲಿಸಬೇಕಾಗಿತ್ತು. ಈ ಘಟನೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ, ತಪ್ಪು ಹೇಗೆ ಸಂಭವಿಸಿತು ಎಂಬುದನ್ನು ಸ್ಪಷ್ಟಪಡಿಸಬೇಕು ಅಂತಾ ಆಗ್ರಹ ಕೇಳಿಬಂದಿದೆ.
ರಾಷ್ಟ್ರಧ್ವಜದ ಗೌರವಕ್ಕೆ ಸಂಬಂಧಿಸಿದ ವಿಚಾರವಾಗಿರುವುದರಿಂದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಮುಂದಿನ ದಿನಗಳಲ್ಲಿ ಇಂತಹ ಲೋಪಗಳು ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.

