ಮುಂಡಗೋಡ ತಾಲೂಕಿನಲ್ಲಿ ಒಂದರ ಹಿಂದೆ ಒಂದರಂತೆ ನಡೆಯುತ್ತಿರೋ ಕಳ್ಳತನ ಪ್ರಕರಣಗಳಿಂದ ಮುಂಡಗೋಡ ತಾಲೂಕಿನ ಜನರಲ್ಲಿ ಆತಂಕ ಮನೆಮಾಡಿದೆ. ಮನೆ, ಅಂಗಡಿ, ದೇವಸ್ಥಾನಗಳನ್ನೇ ಟಾರ್ಗೆಟ್ ಮಾಡುತ್ತಿರುವ ಖದೀಮರಿಗೆ ಇದೀಗ ಮುಂಡಗೋಡ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ.“ಖದೀಮರು ಇನ್ಮುಂದೆ ಮುಂಡಗೋಡದ ಗಡಿಗೆ ಕಾಲಿಡಬೇಕಾದ್ರೂ ಯೋಚಿಸ್ಬೇಕು..!” ಅನ್ನೋ ರೀತಿಯಲ್ಲಿ ಪೊಲೀಸ್ರು ಅಲರ್ಟ್ ಆಗಿದ್ದು, ತಾಲೂಕಿನಾದ್ಯಂತ ಭದ್ರತೆ ಬಿಗಿಗೊಳಿಸಿದ್ದಾರೆ.

ಸರಣಿ ಕಳ್ಳತನ ಪ್ರಕರಣಗಳ ಬೆನ್ನಲ್ಲೇ ಮುಂಡಗೋಡ ಪೊಲೀಸರ “ಆಪರೇಷನ್ ಖಾಕಿ” ಕಣ್ಗಾವಲು ಶುರುವಾಗಿದೆ. ಪಟ್ಟಣ ಮಾತ್ರವಲ್ಲ, ತಾಲೂಕಿನ ಗ್ರಾಮೀಣ ಭಾಗಗಳಲ್ಲೂ ರಾತ್ರಿ ಗಸ್ತು ಹೆಚ್ಚಿಸಲಾಗಿದ್ದು, ಪ್ರಮುಖ ಪ್ರವೇಶ-ನಿರ್ಗಮನ ಮಾರ್ಗಗಳಲ್ಲಿ ನಾಕಾಬಂದಿ ಹಾಕಲಾಗಿದೆ.

ನಾಲ್ಕೂ ದಿಕ್ಕುಗಳಲ್ಲಿ ಖಾಕಿ ಕಣ್ಣು..!
ಹುಬ್ಬಳ್ಳಿ ರಸ್ತೆಯ ವಡಗಟ್ಟಾ ನಾಕಾ, ಬಂಕಾಪುರ ರಸ್ತೆಯ ಸನವಳ್ಳಿ ನಾಕಾ, ಯಲ್ಲಾಪುರ ರಸ್ತೆಯ ಪ್ರಮುಖ ನಾಕಾ ಹಾಗೂ ಶಿರಸಿ ರಸ್ತೆಯಲ್ಲೂ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ವಾಹನಗಳ ಮೇಲೆ ನಿಗಾ ಇಡಲಾಗುತ್ತಿದೆ. ಕಳ್ಳರು ಒಂದು ಕಡೆಯಿಂದ ಬಂದು ಮತ್ತೊಂದು ಕಡೆಯಿಂದ ಪರಾರಿಯಾಗುವ ಸಾಧ್ಯತೆಗೂ ಬ್ರೇಕ್ ಹಾಕಲು ಪೊಲೀಸರು ಗಡಿಭಾಗಗಳ ಮೇಲೆ ವಿಶೇಷ ಗಮನ ಹರಿಸಿದ್ದಾರೆ.
ಪಟ್ಟಣದ ಜೊತೆಗೆ ತಾಲೂಕಿನ ಗ್ರಾಮಗಳಲ್ಲೂ ಸ್ಥಳೀಯರ ಸಹಕಾರದೊಂದಿಗೆ ರಾತ್ರಿ ಕಾವಲು ಮತ್ತು ಪೊಲೀಸ್ ಗಸ್ತು ನಡೆಸಲಾಗುತ್ತಿದೆ.

“ಸಿಸಿಟಿವಿ ಹಾಕಿ” ವ್ಯಾಪಾರಿಗಳಿಗೆ ಖಡಕ್ ನೋಟಿಸ್..!
ಕಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಮುಂಡಗೋಡ ಪಿಐ ರಮೇಶ್ ಹನಾಪುರ ಸಾಹೇಬ್ರು, ಪಟ್ಟಣದ ವ್ಯಾಪಾರಸ್ಥರಿಗೆ ತಮ್ಮ ಅಂಗಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳುವಂತೆ ಖಡಕ್ ಸೂಚನೆ ನೀಡಿದ್ದಾರೆ. ಕಳ್ಳತನ ನಡೆದ ಬಳಿಕ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಸಿಸಿಟಿವಿ ದೃಶ್ಯಗಳು ಪ್ರಮುಖ ಸಾಕ್ಷ್ಯವಾಗುತ್ತವೆ. ಹೀಗಾಗಿ ಪ್ರತಿಯೊಂದು ಅಂಗಡಿ, ವಾಣಿಜ್ಯ ಮಳಿಗೆ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಕೆ ಈಗ ಕಾಲದ ಅಗತ್ಯವಾಗಿದೆ. ಅಷ್ಟೇ ಅಲ್ಲ, ತಾಲೂಕಿನ ಪ್ರತಿಯೊಂದು ಗ್ರಾಮ ಪಂಚಾಯಿತಿಯೂ ತಮ್ಮ ವ್ಯಾಪ್ತಿಯ ಪ್ರಮುಖ ರಸ್ತೆಗಳು, ಪ್ರವೇಶ-ನಿರ್ಗಮನ ಮಾರ್ಗಗಳಲ್ಲಿ ಸಿಸಿಟಿವಿ ಅಳವಡಿಸುವಂತೆ ಪೊಲೀಸರು ಸೂಚಿಸಿದ್ದಾರೆ. ಹಾಗೆಯೇ, ತಾಲೂಕಿನ ದೇವಸ್ಥಾನ, ಮಸೀದಿ, ಚರ್ಚ್ ಸೇರಿದಂತೆ ಧಾರ್ಮಿಕ ಕೇಂದ್ರಗಳಿಗೂ ಸಿಸಿಟಿವಿ ಕಣ್ಗಾವಲು ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಲಾಗಿದೆ.

ಹೆಬ್ಬಾರ್ ಸಾಹೇಬ್ರೇ ದಯವಿಟ್ಟು ಗಮನಿಸಿ..!
ತಾಲೂಕಿನಲ್ಲಿ ಸರಣಿ ಕಳ್ಳತನ ಪ್ರಕರಣಗಳು ನಡೆಯುತ್ತಿರೋ ಸಂಗತಿಗಳು ಬಹುಶಃ ಶಾಸಕ ಶಿವರಾಮ ಹೆಬ್ಬಾರ್ ಅವರ ಗಮನಕ್ಕೂ ಬಂದಿರಬಹುದು. ಪೊಲೀಸ್ರು ತಮ್ಮ ಹಂತದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ ಕಳ್ಳತನ ತಡೆಗೆ ಕೇವಲ ಪೊಲೀಸ್ ಗಸ್ತು ಸಾಕಾಗುವುದಿಲ್ಲ; ತಂತ್ರಜ್ಞಾನ ಮತ್ತು ಮೂಲಸೌಕರ್ಯವೂ ಬೇಕು ಅಲ್ಲವೇ..? ಹೀಗಾಗಿ ತಾಲೂಕಿನ ಪ್ರಮುಖ ಗಡಿಗಳು, ಅರಣ್ಯ ಚೆಕ್‌ಪೋಸ್ಟ್‌ಗಳು ಹಾಗೂ ಪ್ರಮುಖ ಪ್ರವೇಶ ಮಾರ್ಗಗಳಲ್ಲಿ ಅತ್ಯಾಧುನಿಕ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುವ ಅಗತ್ಯವಿದೆ.
ಪಟ್ಟಣದ ಪ್ರಮುಖ ರಸ್ತೆಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಸಾರ್ವಜನಿಕ ಸಿಸಿಟಿವಿ ವ್ಯವಸ್ಥೆ ಕಲ್ಪಿಸುವ ಕೆಲಸವೂ ತುರ್ತಾಗಿ ನಡೆಯಬೇಕಿದೆ. ಕಳ್ಳ ಬಂದ ಮೇಲೆ ಹುಡುಕುವುದಕ್ಕಿಂತ, ಕಳ್ಳನ ಚಲನವಲನ ಮೊದಲೇ ಕ್ಯಾಮೆರಾದಲ್ಲಿ ಸೆರೆಯಾಗುವ ವ್ಯವಸ್ಥೆ ಮಾಡುವುದು ಸೂಕ್ತ. ಸಂಬಂಧ ಪಟ್ಟ ಅರಣ್ಯ ಇಲಾಖೆ, ಪಟ್ಟಣ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಅಧಿಕಾರಿಗಳಿಗೆ ಹೆಬ್ಬಾರ್ ಸಾಹೇಬ್ರು ಸೂಚಿಸಿದ್ರೆ ಸಿಸಿಟಿವಿಗಳು ತಾಲೂಕಾಧ್ಯಂತ ಕಣ್ ತೆರೆಯೋದು ಗ್ಯಾರಂಟಿ. ಆ ಕೆಲಸ ಮಾಡಬೇಕಿರೋದು ಸದ್ಯದ ಅವಶ್ಯಕತೆ.

ಪೊಲೀಸ್ರು ಕಾವಲಿಗಿದ್ದಾರೆ, ಜನ್ರೂ ಎಚ್ಚರವಾಗಿರಲಿ..!
ಸದ್ಯ ಮುಂಡಗೋಡ ಪೊಲೀಸರು ರಾತ್ರಿ ವೇಳೆಯೂ ತಾಲೂಕಿನ ಪ್ರಮುಖ ಗಡಿಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಕಾವಲು ಕಾಯುತ್ತಿದ್ದಾರೆ. ಆದರೆ ಇಲ್ಲಿ ಒಂದು ವಿಷಯ ಸ್ಪಷ್ಟ, ಅಪರಾಧ ತಡೆ ಕೇವಲ ಪೊಲೀಸರ ಜವಾಬ್ದಾರಿ ಅಲ್ಲ. ಗ್ರಾಮಸ್ಥರು ಕೂಡ ತಮ್ಮ ಊರಿನಲ್ಲಿ ಅನುಮಾನಾಸ್ಪದ ವ್ಯಕ್ತಿಗಳು, ವಾಹನಗಳು ಅಥವಾ ಚಟುವಟಿಕೆಗಳು ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ರಾತ್ರಿ ವೇಳೆ ಅನಗತ್ಯವಾಗಿ ಓಡಾಡುವವರ ಬಗ್ಗೆ ಎಚ್ಚರಿಕೆ ವಹಿಸಬೇಕು. ಮನೆ, ಅಂಗಡಿ ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸಿಕೊಳ್ಳಬೇಕು.

ಎಲ್ಲರೂ ಒಟ್ಟಾಗಬೇಕಿದೆ..!
ಸರಣಿ ಕಳ್ಳತನಕ್ಕೆ ಕಡಿವಾಣ ಹಾಕಬೇಕಾದ್ರೆ ಪೊಲೀಸ್ + ಜನಪ್ರತಿನಿಧಿಗಳು + ಸ್ಥಳೀಯ ಆಡಳಿತ + ಗ್ರಾಮಸ್ಥರು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಇಲ್ಲವಾದರೆ ಕಳ್ಳರು ಒಂದು ರಾತ್ರಿ ಬಂದು ಹೋಗುತ್ತಾರೆ.
ಆದ್ರೆ, ಅವರ ನೆರಳಲ್ಲಿ ಜನರ ಆತಂಕ ಮಾತ್ರ ತಿಂಗಳುಗಟ್ಟಲೆ ಉಳಿಯುತ್ತದೆ. ಮುಂಡಗೋಡ ಪೊಲೀಸರ ಖಡಕ್ ಬಂದೋಬಸ್ತಿಗೆ ಜನರ ಸಹಕಾರ ಸಿಕ್ಕರೆ, ಖದೀಮರಿಗೆ ಮುಂಡಗೋಡದ ಗಡಿಯಲ್ಲಿ ಮಾತ್ರವಲ್ಲ, ತಾಲೂಕಿನ ಅಂಗಳದಲ್ಲೇ ಹೆಜ್ಜೆ ಇಡೋಕೂ ಸಾಧ್ಯವಾಗಲ್ಲ..!
