ಮುಂಡಗೋಡ ಬಸ್ ನಿಲ್ದಾಣದ ಅಂಗಡಿಗಳ ಮೇಲೆ ಅಧಿಕಾರಿಗಳ ದಾಳಿ: ಗುಟ್ಕಾ, ಸಿಗರೇಟ್ ಸೇರಿದಂತೆ ತಂಬಾಕು ಉತ್ಪನ್ನಗಳ ವಶ..!

ಮುಂಡಗೋಡ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿರುವ ಅಂಗಡಿಗಳ ಮೇಲೆ ಶಿರಸಿಯಿಂದ ಆಗಮಿಸಿದ ಅಧಿಕಾರಿಗಳ ವಿಶೇಷ ತಂಡ ದಾಳಿ ನಡೆಸಿ, ನಿಷೇಧಿತ ಗುಟ್ಕಾ ಸೇರಿದಂತೆ ವಿವಿಧ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡಿದೆ.

ಸುಮಾರು 5 ರಿಂದ 6 ಮಂದಿ ಅಧಿಕಾರಿಗಳ ತಂಡ ಬಸ್ ನಿಲ್ದಾಣದಲ್ಲಿರುವ ಅಂಗಡಿಗಳ ಮೇಲೆ ಏಕಕಾಲದಲ್ಲಿ ಪರಿಶೀಲನೆ ನಡೆಸಿತು. ಪರಿಶೀಲನೆ ವೇಳೆ ಗುಟ್ಕಾ, ಸಿಗರೇಟ್ ಹಾಗೂ ಇತರೆ ತಂಬಾಕು ಉತ್ಪನ್ನಗಳನ್ನು ಪರಿಶೀಲಿಸಿ, ನಿಯಮ ಉಲ್ಲಂಘನೆಯ ಶಂಕೆ ಹಿನ್ನೆಲೆಯಲ್ಲಿ ಕೆಲವು ವಸ್ತುಗಳನ್ನು ವಶಕ್ಕೆ ಪಡೆದಿರುವ ಮಾಹಿತಿ ಲಭ್ಯವಾಗಿದೆ.

ದಾಳಿ ವೇಳೆ ಅಧಿಕಾರಿಗಳು ಅಂಗಡಿಗಳಲ್ಲಿದ್ದ ವಸ್ತುಗಳನ್ನು ಪರಿಶೀಲಿಸಿ, ಅಗತ್ಯ ದಾಖಲೆಗಳನ್ನು ಪರಿಶೀಲಿಸಿದರು. ಅಲ್ಲದೆ ಅಂಗಡಿ ಮಾಲೀಕರಿಗೆ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದ ನಿಯಮಗಳ ಕುರಿತು ಸೂಚನೆ ನೀಡಿದರು.

ಅಧಿಕಾರಿಗಳ ದಾಳಿಯಿಂದ ಬಸ್ ನಿಲ್ದಾಣದ ವ್ಯಾಪಾರಿಗಳಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇನ್ನು ವಶಪಡಿಸಿಕೊಂಡಿರೊ ತಂಬಾಕು ಉತ್ಪನ್ನಗಳ ಪ್ರಮಾಣ ಹಾಗೂ ಸಂಬಂಧಿಸಿದವರ ವಿರುದ್ಧ ಕೈಗೊಳ್ಳಲಿರುವ ಕಾನೂನು ಕ್ರಮದ ಕುರಿತು ಅಧಿಕಾರಿಗಳು ಇನ್ನಷ್ಟೇ ಅಧಿಕೃತ ಮಾಹಿತಿ ನೀಡಬೇಕಿದೆ.