ಮುಂಡಗೋಡ ತಾಲೂಕಿನ ನಂದಿಕಟ್ಟ ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಕ್ರಮವಾಗಿ ಮನೆಯಲ್ಲಿ ಸಂಗ್ರಹಿಸಿಡಲಾಗಿದ್ದ 9 ಕೆಜಿ ಜಿಂಕೆ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಮತ್ತೊಬ್ಬ ತಲೆಮರೆಸಿಕೊಂಡಿದ್ದಾನೆ.

ಇವನೇ ಆರೋಪಿ..!
ನಂದಿಕಟ್ಟ ಗ್ರಾಮದ ನಿವಾಸಿ ರಮೇಶ್ ಚವ್ವಾಣ್ ಬಂಧಿತ ಆರೋಪಿ. ಮುಂಡಗೋಡಿನ ವಸಂತ್ ಕೊರವರ್ ಎಂಬಾತ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಯಾಗಿದ್ದು, ಆತನ ಪತ್ತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಬಲೆ ಬೀಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ದಾಳಿ..!
ನಂದಿಕಟ್ಟ ಗ್ರಾಮದ ರಮೇಶ್ ಚವ್ವಾಣ್ ಎಂಬಾತನ ಮನೆಯಲ್ಲಿ ಅಕ್ರಮವಾಗಿ ಜಿಂಕೆ ಮಾಂಸವನ್ನು ಇಟ್ಟುಕೊಳ್ಳಲಾಗಿದೆ ಎಂಬ ಖಚಿತ ಮಾಹಿತಿ ಅರಣ್ಯ ಇಲಾಖೆಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಮುಂಡಗೋಡ ವಲಯ ಅರಣ್ಯಾಧಿಕಾರಿ ಅಪ್ಪಾರಾವ್ ಕಲಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಅರಣ್ಯ ಸಿಬ್ಬಂದಿಯ ತಂಡವು ರಮೇಶ್ ಚವ್ವಾಣ್ ಮನೆಯ ಮೇಲೆ ದಾಳಿ ನಡೆಸಿದೆ.
9 ಕೆಜಿ ತೂಗುವ ಮಾಂಸ..!
ದಾಳಿಯ ಸಂದರ್ಭದಲ್ಲಿ ಮನೆಯಲ್ಲಿದ್ದ 9 ಕೆಜಿ ತೂಕದ ಜಿಂಕೆ ಮಾಂಸವನ್ನು ಪತ್ತೆ ಹಚ್ಚಿ, ಜಪ್ತಿ ಮಾಡಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ರಮೇಶ್‌ನನ್ನು ಸ್ಥಳದಲ್ಲೇ ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ.
ಈ ಯಶಸ್ವಿ ದಾಳಿ ಕಾರ್ಯಾಚರಣೆಯಲ್ಲಿ ನೂತನ ACF ಈರೇಶ್ ಕಬ್ಬಿನ್, ಉಪ ವಲಯ ಅರಣ್ಯಾಧಿಕಾರಿ (DyRFO) ಕು. ಸುನೀತಾ ಬಿ. ಎಂ., ಮುತ್ತಣ್ಣ ಹುಂದ್ರಾಳ ಹಾಗೂ ಬೀಟ್ ಫಾರೆಸ್ಟರ್‌ಗಳಾದ ಅಮಿತ ಸಣ್ಣಕ್ಕಿ, ಹೇಮಾ ಕೂಸನೂರ್ ಮತ್ತು ಮುಸ್ತಾಕ್ ಅಲಿ ಒಂಟಿ ಸೇರಿದಂತೆ ಇಲಾಖೆಯ ಸಿಬ್ಬಂದಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು.
ತಲೆಮರೆಸಿಕೊಂಡಿರುವ ಎರಡನೇ ಆರೋಪಿ ವಸಂತ್ ಕೊರವರ್ ಪತ್ತೆಗೆ ತನಿಖೆ ಮುಂದುವರಿದಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಪ್ರಮುಖ ಸುದ್ದಿ👉 ಮುಂಡಗೋಡ ACF ರವಿ ಹುಲಕೋಟಿ ಸಾಹೇಬ್ರು ಕುಂದಾಪುರಕ್ಕೆ ಎತ್ತಂಗಡಿ..! ಈರೇಶ್ ಎಂ. ಕಬ್ಬಿನ್ ನೂತನ ACF..!!
