ಕಾರವಾರ; ಉತ್ತರ ಕನ್ನಡ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026 ಪ್ರಕ್ರಿಯೆ ಚುರುಕಿನಿಂದ ಸಾಗಿದೆ. ಜಿಲ್ಲೆಯಲ್ಲಿ ಒಟ್ಟು 12,30,037 ಮತದಾರರಿದ್ದು, 11,58,776 ಮಂದಿಯ ಮ್ಯಾಪಿಂಗ್ ಮಾಡಲಾಗಿದೆ., ಇದುವರೆಗೂ ಜಿಲ್ಲೆಯಾದ್ಯಂತ ಒಟ್ಟು 12,22,484 ಎನ್ಯುಮರೇಷನ್ ಫಾರ್ಮ್ ಗಳನ್ನು ವಿತರಿಸಲಾಗಿದ್ದು, 94,194 ಫಾರ್ಮ್ ಗಳನ್ನು ಗಣಕೀಕರಣ ಗೊಳಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯಾ ತಿಳಿಸಿದ್ದಾರೆ.

ಈವರೆಗಿನ ಮನೆ ಮನೆ ಭೇಟಿಯ ಸಂದರ್ಭದಲ್ಲಿ ಸ್ಥಳಾಂತರ, ಮರಣ ಹಾಗೂ ದ್ವಿಪ್ರತಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 1399 ಮತದಾರರನ್ನು ಗುರುತಿಸಲಾಗಿದೆ. ಇದರಲ್ಲಿ 191 ಶಾಶ್ವತ ವಲಸೆ ಹಾಗೂ 1102 ಮರಣ ಹೊಂದಿದ ಪ್ರಕರಣಗಳು, 100 ದ್ವಿಪ್ರತಿಗಳು ಸೇರಿವೆ.
ಜಿಲ್ಲೆಯ ಒಟ್ಟು 1445 ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಗೌರವಧನ ಪಾವತಿಸಲು ಮುಖ್ಯ ಚುನಾವಣಾಧಿಕಾರಿಗಳು ಬೆಂಗಳೂರುನಿಂದ ರೂ.1,73,40,000 ಅನುದಾನವನ್ನು ಬಿಡುಗಡೆ ಮಾಡಿದ್ದು, ಸದರಿ ಅನುದಾನವನ್ನು ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಗೌರವಧನ ಪಾವತಿಸಲು ಜಿಲ್ಲೆಯ 12 ಸಹಾಯಕ ಮತದಾರರ ನೋಂದಣಾಧಿಕಾರಿ ಹಾಗೂ ತಹಶೀಲ್ದಾರ ರವರಿಗೆ ಬಿಡುಗಡೆ ಮಾಡಲಾಗಿರುತ್ತದೆ ಎಂದು ತಿಳಿಸಿದ್ದಾರೆ.
