ಉತ್ತರ ಕನ್ನಡ ಜಿಲ್ಲೆಯಲ್ಲಿ ಕ್ರಿಮಿನಲ್ ಚಟುವಟಿಕೆಗಳು ಹಾಗೂ ಡ್ರಗ್ಸ್ ಜಾಲಕ್ಕೆ ಬ್ರೇಕ್ ಹಾಕಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ದೀಪನ್ ಎಂ.ಎನ್. ಅವರು ಭರ್ಜರಿ ಕಾರ್ಯಾಚರಣೆಗೆ ಸನ್ನದ್ಧರಾಗಿದ್ದಾರೆ. ಇದರ ಭಾಗವಾಗಿ ಇಂದು ಮುಂಡಗೋಡ ಪಟ್ಟಣದಲ್ಲಿ ಮಾದಕ ವಸ್ತುಗಳ ಕಳ್ಳದಂಧೆಯನ್ನು ಬೇಧಿಸಲು ಶ್ವಾನ ದಳದೊಂದಿಗೆ ಪೊಲೀಸರು ದಿಢೀರ್ ಜಂಟಿ ಕಾರ್ಯಾಚರಣೆ ನಡೆಸಿದ್ರು.

ಹೊಸ ರೂಪ ಪಡೆದ “ನಶೆ”ಯ ಜಾಲ..!
ಮುಂಡಗೋಡ ಸುತ್ತಮುತ್ತ ಗಾಂಜಾ ಸೇರಿದಂತೆ ವಿವಿಧ ಮಾದಕ ವಸ್ತುಗಳ ಮಾರಾಟ ಜಾಲ ಸದ್ದಿಲ್ಲದೆ ಸಕ್ರಿಯವಾಗಿದೆ. ಈ ಹಿಂದೆ ಮುಂಡಗೋಡಿನ ಕ್ರೈಂ ಟೀಮ್ ಆವಾಗೊಮ್ಮೆ ಇವಾಗೊಮ್ಮೆ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಮಾಲು ಸಮೇತ ಹೆಡೆಮುರಿ ಕಟ್ಟುತ್ತಿತ್ತು. ಪೊಲೀಸರ ಈ ನಿರಂತರ ಕಣ್ಗಾವಲಿನಿಂದ ಬೆದರಿರುವ ಡ್ರಗ್ಸ್ ದಂಧೆಕೋರರು, ಈಗ ತಮ್ಮ ಜಾಲದ ಸ್ಟೈಲ್ ಬದಲಾಯಿಸಿಕೊಂಡಿದ್ದಾರೆ.

ಕೋರಿಯರ್ ಮೂಲಕ ದಂಧೆ..!?
ಗಾಂಜಾ ಸೇರಿ ಮಾದಕ ವಸ್ತುಗಳ ದಂಧೆಕೋರ ಅಕ್ರಮಿಗಳು, ಈಗ ನೇರವಾಗಿ ಕೈಯಿಂದ ಕೈಗೆ ಡ್ರಗ್ಸ್ ತಲುಪಿಸುವ ಬದಲು, ಪೊಲೀಸರ ಕಣ್ಣು ತಪ್ಪಿಸಲು ಕೋರಿಯರ್ ಹಾಗೂ ಪೋಸ್ಟ್ ಮೂಲಕ ಮಾದಕ ವಸ್ತುಗಳನ್ನು ಸರಬರಾಜು ಮಾಡುವ ಹೊಸ ಕಳ್ಳದಾರಿ ಹಿಡಿದಿದ್ದಾರೆ.

ಕೋರಿಯರ್ ಕಚೇರಿಗಳಲ್ಲಿ ಶ್ವಾನ ತಪಾಸಣೆ..!
ಮುಂಡಗೋಡಿನಲ್ಲಿ ಗುರುವಾರ ಕಾರವಾರದ ಪ್ರತ್ಯೇಕ ಶಸ್ತ್ರಾಸ್ತ್ರ ಪಡೆಯು (DAR), ವಿಶೇಷ ತರಬೇತಿ ಪಡೆದ ಶ್ವಾನ ದಳದೊಂದಿಗೆ ಪಟ್ಟಣದ ವಿವಿಧ ಕೋರಿಯರ್ ಹಾಗೂ ಪೋಸ್ಟ್ ಆಫೀಸ್‌ಗಳ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಿತು. ಕಚೇರಿಗಳಲ್ಲಿದ್ದ ಪಾರ್ಸೆಲ್‌ಗಳನ್ನು ಶ್ವಾನದ ಮೂಲಕ ಸೂಕ್ಷ್ಮವಾಗಿ ಪರಿಶೀಲಿಸಲಾಯಿತು. ಈ ವಿಶೇಷ ಶ್ವಾನವು ಕೇವಲ ಮಾದಕ ವಸ್ತುಗಳನ್ನು ಮಾತ್ರ ಪತ್ತೆ ಹಚ್ಚುವ ನಿಖರ ತರಬೇತಿ ಪಡೆದಿದ್ದು, ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸ್ತು.
ಜಿಲ್ಲೆಯಲ್ಲಿ ಯಾವುದೇ ರೀತಿಯ ಮಾದಕ ವಸ್ತುಗಳ ಜಾಲ ತಲೆ ಎತ್ತದಂತೆ ಸೈಲೆಂಟಾಗಿಯೇ ಲಗಾಮು ಹಾಕಲು ಉತ್ತರ ಕನ್ನಡ ಪೊಲೀಸರು ಬಿಲ್ ಕುಲ್ ಅಲರ್ಟ್ ಆಗಿ ನಿಂತಿದ್ದಾರೆ ಅನ್ನೋದು ಅಕ್ರಮಿಗಳ ಪಾಲಿಗೆ ಗರ ಬಡಿದಂತಾಗಿದೆ. ಹೀಗಾಗಿ ಕಳ್ಳ ದಂಧೆಗೆ ಕಳ್ಳದಾರಿ ಹಿಡಿದಿರೋ ದಂಧೆಕೋರರಿಗೆ ಪೊಲೀಸರು ಬೆಂಬಿಡದೇ ಕಾಡುತ್ತಿದ್ದಾರೆ.