ಮುಂಡಗೋಡ ನೂತನ ಸಚಿವ ಲಕ್ಷ್ಮಣ ಸವದಿ ಅವರು ಆಗಸ್ಟ್ 7 ರಂದು ಮುಂಡಗೋಡ ತಾಲ್ಲೂಕಿಗೆ ಭೇಟಿ ನೀಡಲಿದ್ದು, ಅತಿವೃಷ್ಟಿಯಿಂದ ಉಂಟಾಗಿರುವ ಹಾನಿ ಪ್ರದೇಶಗಳ ಪರಿಶೀಲನೆ ನಡೆಸಲಿದ್ದಾರೆ.

ಸಚಿವರ ಪ್ರವಾಸ ಕಾರ್ಯಕ್ರಮದ ಪ್ರಕಾರ, ಆಗಸ್ಟ್ 7 ರಂದು ಮಧ್ಯಾಹ್ನ 3 ಗಂಟೆಗೆ ಸಚಿವರು ಮುಂಡಗೋಡಕ್ಕೆ ಆಗಮಿಸಲಿದ್ದು, ಯಲ್ಲಾಪುರ ಹಾಗೂ ಮುಂಡಗೋಡ ತಾಲ್ಲೂಕಿನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ನಂತರ ಅತಿವೃಷ್ಟಿಯಿಂದ ಹಾನಿಗೊಳಗಾದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಸಭೆಯು ಮುಂಡಗೋಡ ಲೋಕೋಪಯೋಗಿ ಇಲಾಖೆಯ ಐಬಿಯಲ್ಲಿ ನಡೆಯಲಿದ್ದು, ಸಾರ್ವಜನಿಕರ ಸಮಸ್ಯೆಗಳು ಹಾಗೂ ಪರಿಹಾರ ಕ್ರಮಗಳ ಕುರಿತು ಚರ್ಚೆ ನಡೆಯಲಿದೆ. ಅಲ್ಲದೇ ಅನಾವೃಷ್ಟಿಯ ಕುರಿತಾದ ಹಾನಿಯ ಬಗ್ಗೆಯೂ, ಅಧಿಕಾರಿಗಳಿಂದ ಸಂಪೂರ್ಣ ವರದಿ ಪಡೆಯಲಿರುವ ಸಚಿವರು, ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಸೂಚನೆ ನೀಡಲಿದ್ದಾರೆ.
ಸಂಜೆ 4 ಗಂಟೆಗೆ ಮುಂಡಗೋಡದಿಂದ ನಿರ್ಗಮಿಸಲಿರುವ ಸಚಿವರು, ನಂತರ ಹಳಿಯಾಳ ತಾಲ್ಲೂಕಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನೂ ಅವಲೋಕಿಸಲಿದ್ದಾರೆ.
