ಪವಾಡ ಬಸವೇಶ್ವರ ದೇವಸ್ಥಾನದ ಬೆಳ್ಳಿ ಮೂರ್ತಿ ಕಳ್ಳತನ ಕೇಸ್ ಭೇದಿಸಿದ ವಿಜಯಪುರ ಪೊಲೀಸ್ರು; 3 ಅಂತರ್‌ರಾಜ್ಯ ಕಳ್ಳರ ಬಂಧನ, 52.70 ಲಕ್ಷ ರೂ. ಮೌಲ್ಯದ ಬೆಳ್ಳಿ ವಶ..!

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯ ಬಸರಕೋಡ ಗ್ರಾಮದಲ್ಲಿ ನಡೆದಿದ್ದ ಪವಾಡ ಬಸವೇಶ್ವರ ದೇವಸ್ಥಾನದ ಬೆಳ್ಳಿ ಮೂರ್ತಿ ಕಳ್ಳತನ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಗುಜರಾತ್ ಹಾಗೂ ರಾಜಸ್ಥಾನ ಮೂಲದ ಮೂವರು ಅಂತರ್‌ರಾಜ್ಯ ಕಳ್ಳರನ್ನು ಬಂಧಿಸಿರುವ ಪೊಲೀಸರು, ಅಂದಾಜು 52.70 ಲಕ್ಷ ರೂ. ಮೌಲ್ಯದ ಬೆಳ್ಳಿ ಹಾಗೂ ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

​ಘಟನೆಯ ಹಿನ್ನೆಲೆ..!
​ಬಸರಕೋಡ ಗ್ರಾಮದ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಜುಲೈ 05ರ ರಾತ್ರಿ 9.00 ಗಂಟೆಯಿಂದ ಜುಲೈ 06ರ ನಸುಕಿನ 4.30 ಗಂಟೆಯ ಮಧ್ಯಾವಧಿಯಲ್ಲಿ ದುಷ್ಕರ್ಮಿಗಳು ಕೃತ್ಯವೆಸಗಿದ್ದರು. ದೇವಸ್ಥಾನದ ಎರಡು ಕಬ್ಬಿಣದ ಬಾಗಿಲುಗಳ ಕೀಲಿಗಳನ್ನು ಮುರಿದು ಒಳನುಗ್ಗಿದ ಕಳ್ಳರು, ಗರ್ಭಗುಡಿಯ ಗದ್ದುಗೆಯ ಮೇಲಿದ್ದ ಸುಮಾರು 32 ಕೆ.ಜಿ. ತೂಕದ, ಅಂದಾಜು 51,20,000 ರೂ. ಬೆಲೆಬಾಳುವ ಬೆಳ್ಳಿಯ ದೇವರ ಮೂರ್ತಿಯನ್ನು ಕಳವು ಮಾಡಿಕೊಂಡು ಹೋಗಿದ್ದರು. ದೇವಸ್ಥಾನದ ಕಮಿಟಿ ಅಧ್ಯಕ್ಷರಾದ ಕರನಂದೆಪ್ಪ ಯಮನಪ್ಪ ಬಿರಾದಾರ ಅವರು ನೀಡಿದ ದೂರಿನ ಮೇರೆಗೆ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆಗಿಳಿದಿದ್ದ 4 ವಿಶೇಷ ತಂಡಗಳು..!
​ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಜಿಲ್ಲಾ ಪೊಲೀಸ್ ಅಧೀಕ್ಷಕರು ತನಿಖೆಯನ್ನು ಆದ್ಯತೆಯಾಗಿ ಪರಿಗಣಿಸಿ ಒಟ್ಟು 04 ವಿಶೇಷ ತನಿಖಾ ತಂಡಗಳನ್ನು ರಚಿಸಿದ್ದರು,
ಬ.ಬಾಗೇವಾಡಿ ಉಪವಿಭಾಗ ಡಿಎಸ್ಪಿ ಚಂದ್ರಕಾಂತ ನಂದರೆಡ್ಡಿ, ಮುದ್ದೇಬಿಹಾಳ ಪಿಐ ಮಹಮ್ಮದ ಫಸಿಯುದ್ದೀನ,​ ಮುದ್ದೆಬಿಹಾಳ ಪಿಎಸ್ಐ ಸಂಜಯ ತಿಪ್ಪರೆಡ್ಡಿ ಹಾಗೂ ​ಆರ್.‌ ಎಸ್.‌ ಭಂಗಿ ಮತ್ತು ನುರಿತ ಸಿಬ್ಬಂದಿಗಳನ್ನ ನೇಮಿಸಿದ್ದರು.

​ತಾಂತ್ರಿಕ ನೈಪುಣ್ಯತೆ ಮತ್ತು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡ ಪೊಲೀಸರಿಗೆ ಮಹತ್ವದ ಸುಳಿವು ದೊರೆತಿದ್ದು, ಗುಜರಾತ್ ಮೂಲದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

​ಬಂಧಿತ ಆರೋಪಿಗಳ ವಿವರ..!
​ಸುರೇಶಕುಮಾರ ತಂ. ಶಾಂತಿಲಾಲ ಸೋನಿ (51 ವರ್ಷ, ಸಾ: ಜೈನ್‌ವಾಸ ಗೋಹಿಲಿ, ಶಿರೋಹಿ ಜಿಲ್ಲೆ, ರಾಜಸ್ತಾನ, ಹಾಲಿ ವಾಸ: ಅಹ್ಮದಾಬಾದ್, ಗುಜರಾತ್): ಈತನ ಮೇಲೆ ಗುಜರಾತ್ ಮತ್ತು ರಾಜಸ್ಥಾನ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 05 ಕಳ್ಳತನ ಪ್ರಕರಣಗಳು ದಾಖಲಿರುವುದು ತನಿಖೆಯಿಂದ ತಿಳಿದುಬಂದಿದೆ. ​ಬ್ರಹ್ಮಾರ್‌ ತಂ. ಟೋಪಿಯಾ ನೇಟ್‌ (35 ವರ್ಷ, ಸಾ: ಅಂಬಾಜಿ ಕುಂಬಾರಿಯಾ, ಗುಜರಾತ್ ರಾಜ್ಯ), ​ಇಂದ್ರಜೀತ್‌ ತಂ. ಮನಿಯಾರ್‌ ನೇಟ್‌ (33 ವರ್ಷ, ಸಾ: ಅಂಬಾಜಿ ಕುಂಬಾರಿಯಾ, ಗುಜರಾತ್ ರಾಜ್ಯ) ಎಂಬುವವರೇ ಬಂಧಿತರು.

​ಆರೋಪಿಗಳು ಜೂನ್ 20ರಂದೇ ಬಸರಕೋಡ ಗ್ರಾಮಕ್ಕೆ ಬಂದು ದೇವಸ್ಥಾನವನ್ನು ವೀಕ್ಷಿಸಿ ಕಳ್ಳತನಕ್ಕೆ ಸಂಚು ರೂಪಿಸಿದ್ದರು. ಬಳಿಕ ಜುಲೈ 05ರ ರಾತ್ರಿ ಕೃತ್ಯ ಎಸಗಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಕಳ್ಳತನ ಮಾಡಿದ ಬೆಳ್ಳಿ ಮೂರ್ತಿಯನ್ನು 4 ಭಾಗಗಳಾಗಿ ತುಂಡರಿಸಿ, ಇನ್ನುಳಿದ ಭಾಗವನ್ನು ಕರಗಿಸಿ (Melt) ಗಟ್ಟುಗಳನ್ನಾಗಿ ಮಾಡಿ ಮಾರಾಟ ಮಾಡಲು ಯತ್ನಿಸಿದ್ದಾಗಿ ತಿಳಿಸಿದ್ದಾರೆ.

​ವಶಪಡಿಸಿಕೊಂಡ ಸೊತ್ತುಗಳು..!
​4 ಕೆ.ಜಿ. ತೂಕದ ಬಸವೇಶ್ವರ ಮೂರ್ತಿಯ ತುಂಡರಿಸಿದ ತುಣುಕುಗಳು
​ಒಟ್ಟು 23 ಕೆ.ಜಿ. ತೂಕವುಳ್ಳ ಕರಗಿಸಿದ (Melt) ಬೆಳ್ಳಿಯ ಗಟ್ಟಿ ತುಣುಕುಗಳು
​ನಗದು ಹಣ: ರೂ. 67,600/-
​ಮೊಬೈಲ್ ಪೋನ್‌ಗಳು: 02
​ಕೃತ್ಯಕ್ಕೆ ಬಳಸಿದ ಕಾರು (ಸಂಖ್ಯೆ: GJ-01 / KS-4317)
​ಕೃತ್ಯಕ್ಕೆ ಬಳಸಿದ ಕಬ್ಬಿಣದ ರಾಡ್‌ಗಳು: 02
​ಒಟ್ಟು ಮೌಲ್ಯ: ರೂ. 52,70,000/-

​ಪ್ರಸ್ತುತ ಮೂವರು ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದ್ದು, ಕೃತ್ಯದಲ್ಲಿ ಭಾಗಿಯಾಗಿರುವ ಇತರೆ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ. ಈ ಜಟಿಲ ಪ್ರಕರಣವನ್ನು ಯಶಸ್ವಿಯಾಗಿ ಪತ್ತೆಹಚ್ಚಿದ ತನಿಖಾ ತಂಡದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕರ್ತವ್ಯವನ್ನು ಐಜಿಪಿ ಉತ್ತರ ವಲಯ ಬೆಳಗಾವಿ ರವರು ಶ್ಲಾಘಿಸಿ, ಪ್ರತ್ಯೇಕ ಪ್ರಶಂಸನಾ ಪತ್ರ ನೀಡಿ ಗೌರವಿಸಿರುತ್ತಾರೆ. ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ರವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ಯಶಸ್ವಿಯಾಗಿದೆ.